ಅಂಕೋಲಾ: ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ಹೃದಯ ಸಂಬಂಧಿ ಖಾಯಿಲೆಗಳಿಂದ ದೂರ ಇರಬಹುದು ಎಂದು ಮಣಿಪಾಲ ಕಾಲೇಜ ಆಫ್ ನರ್ಸಿಂಗ್ ಸಹಾಯಕ ಪ್ರಾಧ್ಯಾಪಕಿ ಭಾರತಿ ಆರ್ ನಾಯಕ ಹೇಳಿದರು.
ಅವರು ಬುಧವಾರ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ನಲ್ಲಿ ನಡೆದ ‘ವಿಶ್ವ ಹೃದಯ ದಿನ’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಅನುವಂಶೀಯವಾಗಿ ಬರುವ ರೋಗಗಳ ಬಗ್ಗೆ ಈಚೆಗೆ ಜನ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಯುವ ಸಮುದಾಯದವರು ಅನುವಂಶೀಯ ರೋಗಗಳ ಕುರಿತು ಅರಿವು ಹೊಂದಿರಬೇಕು. ಅದರಲ್ಲಿಯೂ ಮುಖ್ಯವಾಗಿ ಹೃದಯ ಸಂಬಂಧಿ ಖಾಯಿಲೆಗಳ ಬಗ್ಗೆ ಜಾಗೃತಿಯಿಂದ ಇರಬೇಕು. ಉತ್ತಮ ಆಹಾರ ಸೇವನೆ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರಿಂದ ಹೃದಯ ಸಂಬಂಧಿ ರೋಗಗಳನ್ನು ತಡೆಯಬಹುದು. ದಿನ ನಿತ್ಯ ವ್ಯಾಯಾಮ, ಕ್ರಮ ಬದ್ಧವಾದ ನಿದ್ರೆಯನ್ನು ಅಳವಡಿಸಿಕೊಂಡು ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್’ನ ಉಪ ಪ್ರಾಚಾರ್ಯರಾದ ದೀಪಾಲಿ ಕುರ್ಡೇಕರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯರಾದ ಶಂಕರಗೌಡ ಕಡೆಮನೆ ಅಧ್ಯಕ್ಷತೆ ವಹಿಸಿದ್ದರು. ನಯನಾ ತಾಂಡೇಲ್ ನಿರ್ವಹಿಸಿದರು. ವೀಕೇಶ್ ನಾಯ್ಕ ವಂದಿಸಿದರು. ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಕಾರ್ಯಕ್ರಮ ವೀಕ್ಷಿಸಿದರು.