ಶಿರಸಿ: ಸ್ವಾತಂತ್ರ್ಯೋತ್ಸವದ ಅಮೃತ ವರ್ಷ ಆಚರಣೆ ಮಾಡುವ ಹಕ್ಕು ಕಾಂಗ್ರೆಸ್, ಜೆಡಿಎಸ್‍ಗೆ ಇದೆ. ಆದರೆ ನೈತಿಕವಾಗಿ ಬಿಜೆಪಿ ಹಕ್ಕು ಕಳೆದುಕೊಂಡಿದೆ ಎಂದು ರಾಜೀವ ಗಾಂಧಿ ಪಂಚಾಯತರಾಜ್ ರಾಷ್ಟ್ರೀಯ ಸಮಿತಿ ಸದಸ್ಯ ಡಿ.ಆರ್.ಪಾಟೀಲ ಆರೋಪಿಸಿದರು.
ಇಲ್ಲಿನ ಅಂಬೇಡ್ಕರ ಭವನದಲ್ಲಿ ಬುಧವಾರ ಸಂಘಟನೆಯ ಜಿಲ್ಲಾಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು. ಕ್ವಿಟ್ ಇಂಡಿಯಾ ಚಳುವಳಿಗೆ ಗಾಂಧೀಜಿ ಕ್ವಿಟ್ ಕರೆ ಕೊಟ್ಟಾಗ ಅದನ್ನು ಬಹಿಷ್ಕರಿಸಿದ್ದ ವೀರ ಸಾವರ್ಕರ್ ಅವರನ್ನು ಆರಾಧಿಸುವ ಬಿಜೆಪಿಗೆ ಸ್ವಾತಂತ್ರೋತ್ಸವದ ಅಮೃತ ವರ್ಷ ಆಚರಿಸುವ ನೈತಿಕತೆ ಇಲ್ಲ. ಮುಂದೆಂದೂ ಚಳುವಳಿಯಲ್ಲಿ ಭಾಗವಹಿಸುವುದಿಲ್ಲ, ಬ್ರಿಟೀಷರ ಜೊತೆಗೆ ಕೈಜೋಡಿಸುವುದಿಲ್ಲ ಎಂದು ವೀರ ಸಾವರ್ಕರ್ ಪತ್ರ ಬರೆದುಕೊಟ್ಟ ಮೇಲೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಇದು ನೈಜ ಇತಿಹಾಸ. ಆದರೆ ಬಿಜೆಪಿಗರು ಸುಳ್ಳು ಇತಿಹಾಸ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಇತಿಹಾಸ ಬಿಂಬಿಸುವ ಬಿಜೆಪಿಗರ ಮನಸ್ಥಿತಿಯನ್ನು ಜನರಿಗೆ ಅರ್ಥ ಮಾಡಿಸಬೇಕಿದೆ. ಇಂದಿರಾಗಾಂಧಿ ಯುಗದ ಕಾಂಗ್ರೆಸ್ ಮತ್ತೆ ಆರಂಭವಾಗಬೇಕಿದೆ’ ಎಂದರು.
ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ವಿಧಾನ ಪರಿಷತ ಸದಸ್ಯ ವಿಜಯ್ ಸಿಂಗ್, ವಿನುತಾ ಓರಾ, ವಿ.ವೈ.ಘೋರ್ಪಡೆ, ಭೀಮಣ್ಣ ನಾಯ್ಕ ಇತರರು ಇದ್ದರು.