ಹಳಿಯಾಳ: ತಾಲೂಕಿನ ರಾಮನಗರ ಆಸ್ಪತ್ರೆಗೆ ಬುಧವಾರ ಅಂಬ್ಯುಲೆನ್ಸ್ ಹಸ್ತಾಂತರಿಸಿದ ಶಾಸಕ ಆರ್. ವಿ. ದೇಶಪಾಂಡೆ ಈ ತಾಲೂಕು ಹಳ್ಳಿಗಳಿಂದ ಕೂಡಿದ ಪ್ರದೇಶ. ಇಲ್ಲಿಯ ಹಳ್ಳಿಯ ರಸ್ತೆಗಳು ಚಿಕ್ಕದಾಗಿದ್ದು, ಸಣ್ಣ ಅಂಬ್ಯುಲೆನ್ಸ್ ಅತ್ಯಗತ್ಯವಾಗಿದೆ ಆದ್ದರಿಂದ ರಾಮನಗರ ಆಸ್ಪತ್ರೆಗೆ ಚಿಕ್ಕದಾದ ಅಂಬ್ಯುಲೆನ್ಸ್ ಅನ್ನು ವೋಲ್ವೋ ಕಂಪನಿ ವತಿಯಿಂದ ನೀಡಿದ್ದೇನೆ ಎಂದು ಹೇಳಿದರು.
ಅವರು ತಾಲೂಕಿನ ರಾಮನಗರ ಆಸ್ಪತ್ರೆಗೆ ಬುಧವಾರ ಅಂಬ್ಯುಲೆನ್ಸ್ ಹಸ್ತಾಂತರಿಸಿ ಮಾತನಾಡಿ, ಜೊಯಿಡಾ ತಾಲೂಕಿನಲ್ಲಿ ಹಳ್ಳಿಗಳೇ ಹೆಚ್ಚಾಗಿವೆ. ಇಲ್ಲಿ ಅಂಬ್ಯುಲೆನ್ಸ ಕೊರತೆ ಇದ್ದು, ವೋಲ್ವೋ ಕಂಪನಿ ವತಿಯಿಂದ ರಾಮನಗರ ಆಸ್ಪತ್ರೆಗೆ ಸಣ್ಣ ಅಂಬ್ಯುಲೆನ್ಸ್ ನೀಡಲಾಗಿದ್ದು, ಈ ಬಗ್ಗೆ ಅವರಿಗೆ ತಾಲೂಕಿನ ಜನತೆ ಪರವಾಗಿ ಅಭಿನಂದಿಸುತ್ತೇನೆ ಎಂದರು.
ತಾಲೂಕು ವಿಸ್ತಾರವಾಗಿದ್ದು, ಇಲ್ಲಿನ ಜನರಿಗೆ ಅನುಕೂಲವಾಗ ಬೇಕು ಎನ್ನುವ ದೃಷ್ಟಿಯಿಂದ ಅಂಬ್ಯುಲೆನ್ಸ್ ನೀಡಲಾಗಿದೆ. ದೇವರು ಎಲ್ಲರಿಗೂ ಆಯುಷ್ಯ, ಆರೋಗ್ಯ ನೀಡಲಿ. ಆದರೆ ಕೆಲ ಸಮಯದಲ್ಲಿ ಅಪಘಾತಗಳು ಆಗುತ್ತವೆ. ಅಂತಹ ಸಂದರ್ಭದಲ್ಲಿ ತಾಲೂಕಿನ ಜನರಿಗೆ ಅಂಬ್ಯುಲೆನ್ಸ್ ಉಪಯೋಗ ಸಿಗಲಿ ಎಂದರು. ಸ್ವತಃ ದೇಶಪಾಂಡೆ ಅವರೇ ಅಂಬ್ಯುಲೆನ್ಸ್ ಹತ್ತಿ ಡ್ರೈವರ್ ಸೀಟಿನಲ್ಲಿ ಕುಳಿತು ಅಂಬ್ಯುಲೆನ್ಸ್ ಪರೀಕ್ಷಿಸಿದರು.
ಈ ಮೊದಲು ಕ್ಯಾಸಲ್‌ರಾಕ್ ಆಸ್ಪತ್ರೆಗೆ ಭೇಟಿ ನೀಡಿ, ನಂತರದಲ್ಲಿ ಸಿಂಗರಗಾವದಲ್ಲಿ ನೂತನ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ದಬ್ಗಾರ, ಜಿ. ಪಂ ಮಾಜಿ ಸದಸ್ಯ ಸಂಜಯ ಹಣಬರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರತ ನಾಯಕ, ತಾಲೂಕಾ ವೈದ್ಯಾಧಿಕಾರಿ ಡಾ. ಸುಜಾತಾ ಉಕ್ಕಲಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.