ಶಿರಸಿ : ತಾಲೂಕಿನ ಮತ್ತಿಘಟ್ಟದ ಮಧುಸೂಧನ ಹೆಗಡೆ ಮತ್ತು ಚಂದ್ರಶೇಖರ ಹೆಗಡೆಯವರ ಸುಮಾರು 2 ಎಕರೆ ಫಲಭರಿತ ಅಡಿಕೆ ತೋಟ ಮಳೆಗಾಲದಲ್ಲಿ ಸಂಭವಿಸಿದ ಧರೆ ಕುಸಿತದ ಪರಿಣಾಮ ಸಂಪೂರ್ಣ ಮಣ್ಣಿನಡಿ ಸಿಲುಕಿ ನಾಶವಾಗಿದ್ದು,ಹಲವು ತಿಂಗಳುಗಳೇ ಕಳೆದರೂ ಸರ್ಕಾರದಿಂದ ಪರಿಹಾರ ದೊರೆತಿಲ್ಲ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಒಳಗೊಂಡು ಹಲವರು ಘಟನಾ ಸ್ಥಳಕ್ಕೆ ಭೆಟ್ಟಿ ನೀಡಿ ಸರಕಾರದಿಂದ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದ್ದರು. ಆದರೆ ಈ ವರೆಗೂ ಪರಿಹಾರ ಬಂದಿಲ್ಲದ ಕಾರಣ ಸಂತ್ರಸ್ಥರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು ಪರಿಹಾರ ನೀಡುವಂತೆ ಸಾಮಾಜಿಕ ಸೇವಾ ಕಾರ್ಯಕರ್ತರು, ಸಾಮಾಜಿಕ ಧುರೀಣರೂ ಆಗಿರುವ ವಿಶ್ವನಾಥ ಶರ್ಮಾ ನಾಡಗುಳಿ ಅವರು ಆಗ್ರಹಿಸಿದ್ದಾರೆ.
ಸ್ವರ್ಣವಲ್ಲಿ ಮಠ ಒಳಗೊಂಡು ಕೆಲವು ದಾನಿಗಳು ನೆರವು ನೀಡಿದ್ದಾರೆ. ಸರಕಾರ ಕೂಡಲೇ ಈ ರೈತರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ನಾಡಗುಳಿ ಶರ್ಮಾ ಒತ್ತಾಯಿಸಿದ್ದು ಜನಪ್ರತಿನಿಧಿಗಳು ಗಮನಿಸುವಂತೆ ಆಗ್ರಹಿಸಿದ್ದಾರೆ.