ಬೆಂಗಳೂರು: ರಾಜ್ಯದಲ್ಲಿ ಆಮಿಷದ, ಬಲವಂತದ ಮತಾಂತರಗಳ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಇಲರ ಸಂಪೂರ್ಣ ನಿಯಂತ್ರಣ ಹಿನ್ನೆಲೆಯಲ್ಲಿ ಕಾನೂನು ರೂಪಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಲವಂತವಾಗಿ ಮತಾಂತರ ಮಾಡುವ ಬಗ್ಗೆ ರಾಜ್ಯದಲ್ಲಿ ಕಠಿಣ ಕಾನೂನು ರೂಪಿಸಲು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಸ್ವ ಇಚ್ಛೆಯಿಂದ ಮತಾಂತರ ಹೊಂದುವವರಿಗೆ ಅವಕಾಶ ಇದೆ. ಆದರೆ ಹಣ, ಒಡವೆಗಳ ಆಮಿಷಗಳಿಗೆ ಒಳಗಾಗಿ ಮತ್ತು ಇನ್ನು ಕೆಲವು ಬಾರಿ ಬಲವಂತವಾಗಿ ಮತಾಂತರ ಮಾಡುವುದಕ್ಕೆ ಅವಕಾಶ ಇಲ್ಲ. ಈ ನಿಟ್ಟಿನಲ್ಲಿ ಬಲವಂತದ ಮತಾಂತರ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಒತ್ತಾಯಪೂರ್ವಕವಾಗಿ ಅಥವಾ ಬಲವಂತವಾಗಿ ಮತಾಂತರ ಮಾಡುವುದು ಕಾನೂನು ಬಾಹಿರ ಪ್ರಕ್ರಿಯೆಯಾಗಿದೆ. ಬೇರೆ ಬೇರೆ ರಾಜ್ಯಗಳ ಕಾನೂನು ಕ್ರಮಗಳ ಅಧ್ಯಯನ ನಡೆಸಿ, ರಾಜ್ಯದಲ್ಲಿಯೂ ಕಾಯ್ದೆ ಜಾರಿಗೆ ತರಲು ಸರ್ಕಾರ ಚಿಂತಿಸಿರುವುದಾಗಿ ತಿಳಿಸಿದ್ದಾರೆ.