ಅಂಕೋಲಾ: ವೈದ್ಯಕೀಯ ಆಮ್ಲಜನಕ ಸಿಲಿಂಡರ್’ಗಳನ್ನು ಆಮ್ಲಜನಕ ಉತ್ಪಾದನಾ ಘಟಕ ಬೆಟ್ಕುಳಿಯಿಂದ ಹೊತ್ತು ಅಂಕೋಲಾ ಸಮೀಪದ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗುತ್ತಿದ್ದ ಮಿನಿ ಲಾರಿ ಪಲ್ಟಿಯಾಗಿ ಆತಂಕ ಸೃಷ್ಟಿಯಾಗಿದೆ.
ಆಮ್ಲಜನಕ ಸಿಲಿಂಡರ್’ಗಳನ್ನು ಬೆಟ್ಕುಳಿಯಿಂದ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ವಾಹನ ಪಲ್ಟಿಯಾದ ಕಾರಣ ಆಕ್ಸಿಜನ್ ಸಿಲೆಂಡರ್ ಸೋರಿಕೆಯಾಗುತ್ತಿರುವುದು ಕಂಡು ಬಂತು. ವೈದ್ಯಕೀಯ ಸೇವೆಗೆ ಬಳಸುವ ಆಮ್ಲಜನಕ ಎಂದು ತಿಳಿದೊಡನೆ ಯಾವುದೇ ಅಪಾಯವಿಲ್ಲ ಎಂದು ಅಕ್ಕಪಕ್ಕದ ನಿವಾಸಿಗಳು ಮತ್ತು ದಾರಿಹೋಕರು ಸಮಾಧಾನದ ನಿಟ್ಟುಸಿರು ಬಿಟ್ಟರು. ಆದರೆ, ಮಿನಿಲಾರಿ ಪಲ್ಟಿಯಾದ ವಾಹನ ಚಾಲಕ ಮತ್ತು ಸಹಾಯಕರು ಗಾಯಗೊಂಡಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವಾಹನದಲ್ಲಿ ಸಿಲುಕಿಕೊಂಡಿದ್ದ ಸಿಬ್ಬಂದಿಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಗ್ನಿ ಶಾಮಕ ದಳದ ಠಾಣಾಧಿಕಾರಿ ಉಮೇಶ ನಾಯ್ಕ ಸಿಬ್ಬಂದಿಗಳಾದ ಜೀವನ ಬಬ್ರುಕರ್, ಗಣೇಶ ನಾಯ್ಕ, ರವಿರಾಜ್ ಜೊತೆ ಮಂಜುನಾಥ ನಾಯಕ ಮೊದಲಾದವರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪಿಎಸ್‍ಐ ಪಿಎಸ್‍ಐ ಪ್ರೇಮನ ಗೌಡ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.