ಶಿರಸಿ: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ಪಡೆಯಲು ಕೇಳಿರುವ ಶಾಲಾ ಕಟ್ಟಡದ ಅಗ್ನಿ ಸುರಕ್ಷತೆಯ ಪ್ರಮಾಣ ಪತ್ರಕ್ಕೆ ವಿಧಿಸಿರುವ ಶುಲ್ಕಕ್ಕೆ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ ನಗರದಲ್ಲಿ ಇಂದು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರವರಿಗೆ ಮನವಿ ನೀಡಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ಶಿಕ್ಷಣ ಇಲಾಖೆಯು ಅನೇಕ ಶರತ್ತುಗಳನ್ನು ವಿಧಿಸಿದ್ದು ಇದರಲ್ಲಿ ಶಾಲಾ ಕಟ್ಟಡದ ಅಗ್ನಿ ಸುರಕ್ಷತೆಯ ಪ್ರಮಾಣ ಪತ್ರ ಕೂಡಾ ಒಂದು. ಈ ಪ್ರಮಾಣ ಪತ್ರ ಪಡೆಯಲು ಸಂಬಂಧಿಸಿದ ಇಲಾಖೆಯು 20 ಸಾವಿರ ರೂ. ದಂಡ ವಿಧಿಸಿದೆ. ಇಷ್ಟೊಂದು ಹಣ ನೀಡುವುದು ಸಣ್ಣ-ಸಣ್ಣ ಶಿಕ್ಷಣ ಸಂಸ್ಥೆಗಳಿಗೆ ಹೊರೆಯಾಗುತ್ತಿದೆ. ಕೊರೊನದಿಂದಾಗಿ ಖಾಸಗಿ ಶಿಕ್ಷಣ ಸಂಸ್ಥೆಯು ಬಾರಿ ಸಂಕಷ್ಟದಲ್ಲಿದೆ.
ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿನ ಶಿಕ್ಷಣ ಸಂಸ್ಥೆಗೆ ಇಷ್ಟೊಂದು ಶುಲ್ಕ ಭರಿಸುವುದು ಕಷ್ಟವಾಗಿದ್ದು, ಕೂಡಲೇ ವಿಧಿಸಿರುವ ಶುಲ್ಕದಲ್ಲಿ ನೀಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಚಿವರು ಕೂಡಲೆ ಸಂಬಂಧಿಸಿದ ಇಲಾಖೆಯವರಲ್ಲಿ ಮಾತನಾಡುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯ ಭೀಮಣ್ಣ ನಾಯ್ಕ, ಜಿ.ಎಂ ಹೆಗಡೆ ಮುಳಖಂಡ, ಜಿ ಎನ್ ಹೆಗಡೆ ಮುರೇಗಾರ ಮುಂತಾದವರು ಉಪಸ್ಥಿತರಿದ್ದರು.