ಅಂಕೋಲಾ: ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ದೇಶನಬಾಗ್ ಸಮುದ್ರ ತೀರದಲ್ಲಿ ವಾಕಿಂಗ್’ಗೆ ತೆರಳಿದ್ದ ವ್ಯಕ್ತಿಯೋರ್ವ ಸಮುದ್ರದ ಅಲೆಗಳ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋದ ಘಟನೆ ನಡೆದಿದೆ.
ಘಟನೆಯಲ್ಲಿ ಸಾವನ್ನಪ್ಪಿರುವ ವ್ಯಕ್ತಿಯನ್ನು ಕಾರವಾರ ತಾಲೂಕಿನ ಅರ್ಗ ನೇವಲ್ ಬೇಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾವಿಕೇರಿಯ ಪುರಂದರ ಶಿವಾನಂದ ನಾಯ್ಕ ಎಂದು ಗುರುತಿಸಲಾಗಿದೆ. ಈತ ಭಾರತೀಯ ನೌಕಾಸೇನೆಯಲ್ಲಿ ಸಿಬ್ಬಂದಿಯಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ರವಿವಾರದ ರಜಾ ದಿನದಂದು ಅಂಕೋಲಾ ತಾಲೂಕಿನ ಭಾವಿಕೇರಿಯ ತನ್ನ ಮನೆಯ ಹತ್ತಿರವಿರುವ ಸಮುದ್ರ ತೀರಕ್ಕೆ ವಾಕಿಂಗ್ ಹೋದವನು, ಹತ್ತಿರದಲ್ಲಿ ತನ್ನ ಗೆಳೆಯರು ಮೀನು ಹಿಡಿಯುತ್ತಿರುವುದನ್ನು ಗಮನಿಸಿ, ಅಲ್ಲಿ ನೋಡಲು ಹೋದಾಗ ಆಕಸ್ಮಿಕವಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಘಟನಾ ಸ್ಥಳದ ಹತ್ತಿರ ಸಮುದ್ರದಲ್ಲಿ ಪುರಂದರ ನಾಯ್ಕ ಶವವಾಗಿ ಪತ್ತೆಯಾಗಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಅಂಕೋಲಾ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ 88ಸಾಗಿಸಲಾಗಿದೆ. ಘಟನೆ ಸಂಬಂಧ ಪೊಲೀಸ್ ಪ್ರಕರಣ ದಾಖಲಾಗಿದೆ.