ಶಿರಸಿ: ಸ್ವರ್ಣವಲ್ಲೀಯ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಅಡಿಯಲ್ಲಿ 2021ರ ಭಗವದ್ಗೀತಾ ಅಭಿಯಾನದ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಅಂತರ್ಜಾಲ ಸಭೆ ನಡೆಯಿತು.
ಈ ಸಭೆಯಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು. ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಅವರು ಆಶೀರ್ವಚನ ನುಡಿದು, ಅಭಿಯಾನ 15 ವರ್ಷಗಳಿಂದ ನಡೆಯುತ್ತಿದೆ. ಈ ವರ್ಷದ ಅಭಿಯಾನ ಹೇಗೆ ನಡೆಸಬೇಕು ಎಂಬ ಕುರಿತು ಚರ್ಚೆ ಮಾಡಬೇಕಾಗಿದೆ. ಮೂರನೇ ಅಧ್ಯಾಯಕ್ಕೆ ವಿಶೇಷ ಸ್ಥಾನವಿದೆ. ಕರ್ಮಯೋಗದ ಬಗ್ಗೆ ಕಳೆದ ಬಾರಿ ಮೂರನೇ ಅಧ್ಯಾಯದ ಬಗ್ಗೆ ಒಂದು ವಾರ ಪ್ರವಚನ ನಡೆದಿದೆ. ಈ ಅಧ್ಯಾಯದಲ್ಲಿ ಜ್ಞಾನದ ಅರ್ಹತೆ ಬರಬೇಕಾದರೆ ಕರ್ಮಯೋಗ ಮಾಡಲೇಬೇಕು. ಆಗ ಜ್ಞಾನಯೋಗದ ಅರ್ಹತೆ ಬರುತ್ತದೆ ಎಂದರು.
ಜ್ಞಾನಯೋಗ ಒಂದು ವಿಶೇಷವಾದ ಸ್ಥಿತಿ. ನಾನು ಮತ್ತು ಭಗವಂತನ ನಡುವೆ ಜ್ಞಾನ ಎಂಬ ಸ್ಥಿತಿ ಬರಬೇಕಾದರೆ ಕರ್ಮಯೋಗ ಮಾಡಬೇಕು. ಹೀಗಾಗಿ ಇದು ಅತ್ಯಂತ ಅಗತ್ಯ. ಈ ಅಧ್ಯಾಯದಲ್ಲಿ ಯಜ್ಞದ ಬಗ್ಗೆ ವಿಶೇಷವಾದ ಉಲ್ಲೇಖವಿದೆ. ಇಲ್ಲೊಂದು ಚಕ್ರ ಇದೆ. ಆ ಚಕ್ರ ಯಜ್ಞದಿಂದಲೇ ನಡೆಯಬೇಕು. ಯಜ್ಞಕ್ಕೂ ಮಳೆಗು ಸಂಬಂಧವಿದೆ. ಯಜ್ಞಗಳ ಆಚರಣೆ, ಕರ್ಮಗಳ ಆಚರಣೆ ಮಾಡಲೇಬೇಕು. ಇಲ್ಲದಿದ್ದರೆ ವ್ಯವಸ್ಥೆಯೇ ನಷ್ಟವಾಗುತ್ತದೆ. ಜನಕಾದಿಗಳೂ ಈ ಕರ್ಮಯೋಗವನ್ನು ಮಾಡಿಕೊಂಡೇ ಬಂದಿದ್ದಾರೆ ಎಂದರು.
ನಮ್ಮ ಆಸೆಗಳು ಅದರ ಹಿಂದಿರುವ ಕ್ರೋಧ ಅಪರಾಧಗಳಿಗೆ ಕಾರಣ. ಇಂದ್ರಿಯ ಮನೋ ಬುದ್ಧಿ ಇದ ಉಗ್ರಗಾಮಿಗಳ ನೆಲೆಯೂ ಹೌದು. ಅದಕ್ಕಾಗಿ ನಡೆಯುವುದು ಅದಕ್ಕಾಗಿ ಮೊದಲು ಹಿಡಿತಕ್ಕೆ ಬರಬೇಕು. ಆಸೆಗಳಿಗೆ ಕಡಿವಾಣ ಹಾಕಬೇಕು. ಅಪರಾಧಗಳು ಹೊಸ ಹೊಸ ರೀತಿಯಲ್ಲಿ ನಡೆಯುತ್ತದೆ. ಇದಕ್ಕೆ ಒಳಗಿರುವ ಪರಿವರ್ತನೆ ಅತೀ ಅಗತ್ಯ. ಈ ಹಿನ್ನೆಲೆಯಲ್ಲಿ ಈ ಅಧ್ಯಾಯವನ್ನು ಅಭ್ಯಾಸ ಮಾಡಬೇಕಾಗಿದೆ ಎಂದರು.
ಈ ಅಭಿಯಾನದ ಮುಖ್ಯ ಕಾರ್ಯಕ್ರಮ ನವಂಬರ್ ತಿಂಗಳಲ್ಲಿ ನಡೆಯಬೇಕಿದೆ. ಡಿಸೆಂಬರ್ 14ರಂದು ಗೀತಾ ಜಯಂತಿಯ ಕಾರ್ಯಕ್ರಮ ನಡೆಯಬೇಕು. ಗೀತಾ ಕಂಠಪಾಠ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆ ಮೂರು ಹಂತಗಳಲ್ಲಿ ನಡೆಯಬೇಕು. ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ನಡೆಯಬೇಕು ಎಂದೂ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಪ್ರಾರಂಭದಲ್ಲಿ ಭಗವದ್ಗೀತಾ ಸಂಚಾಲಕರಾದ ಪೆÇ್ರ.ಕೆ.ವಿ ಭಟ್ಟ ಫಲಸಮರ್ಪಣೆ ಮಾಡಿದರು. ಸಂಪರ್ಕ ಪ್ರಮುಖರಾದ ವೆಂಕಟ್ರಮಣ ಹೆಗಡೆ ಹಾಗೂ ಅಂತರ್ಜಾಲದಲ್ಲಿ ಜಿಲ್ಲೆಯ ಎಲ್ಲಾ ಪ್ರಮುಖರು ಉಪಸ್ಥಿತರಿದ್ದರು.