ಕಾರವಾರ: ಹೆಚ್ಚಿನ ಚಿಕಿತ್ಸೆಗಾಗಿ ದೂರದ ಮಣಿಪಾಲ, ಮಂಗಳೂರು, ಗೋವಾ, ಹುಬ್ಬಳ್ಳಿಗಳಿಗೆ ತೆರಳಲು ಆರೋಗ್ಯ ಇಲಾಖೆಯ ಅಂಬ್ಯುಲೆನ್ಸ್‍ಗಳನ್ನು ರೋಗಿಗಳು ಬಳಸುವ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಬಿಪಿಎಲ್ ಕಾರ್ಡ್‍ದಾರರಿಗೆ, ಎಸ್. ಸಿ. ಎಸ್. ಟಿ. ಸಮುದಾಯದ ಬಡವರಿಗೆ ಅಂಬ್ಯುಲೆನ್ಸ್‍ಗೆ ಯಾವುದೇ ಬಾಡಿಗೆ ದರ ಪಡೆದುಕೊಳ್ಳದೇ ಉಚಿತವಾಗಿ ನೀಡಬೇಕು ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ, ಆರೋಗ್ಯ ಸಚಿವ ಕೆ. ಸುಧಾಕರ ಹಾಗೂ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಮಾಡಿರುವುದಾಗಿ ರವಿವಾರ ತಿಳಿಸಿದ್ದಾರೆ.
ಈ ಕುರಿತು ದೂರವಾಣಿ ಮೂಲಕ ಕರೆ ಮಾಡಿ ಸಚಿವ ಹೆಬ್ಬಾರ್ ಅವರೊಂದಿಗೆ ವಿನಂತಿಸಿದ್ದಾರೆ. ಆರೋಗ್ಯ ಇಲಾಖೆಯ ಅಂಬ್ಯುಲೆನ್ಸ್‍ಗಳನ್ನು ಸಾರ್ವಜನಿಕರು ಉಪಯೋಗಿಸಿದರೆ, ರೋಗಿಗಳ ಕಡೆಯವರೇ ಇಂಧನ ಪೂರೈಸಬೇಕಾಗಿದೆ. ಈ ಬಗ್ಗೆ ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ 2012ರಲ್ಲಿ ಆಗಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಸರಕಾರದ ಪರಿಷ್ಕೃತ ಆದೇಶಗಳ ಅನ್ವಯ ಅಂಬ್ಯುಲೆನ್ಸ್‍ಗಳಿಗೆ ಸಾರ್ವಜನಿಕರಿಂದ ಬಾಡಿಗೆ ದರ ಪಡೆಯಬಹುದು ಎಂದು ಸುತ್ತೋಲೆ ಮೂಲಕ ಸ್ಪಷ್ಟಿಕರಣ ನೀಡಿದ್ದರು.