ಕುಮಟಾ: ಅನುಸೂಚಿತ ಜಾತಿಯ ಸಮಾಜ ಮಂದಿರ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ನಿರ್ಲಕ್ಷ್ಯ ತೋರುತ್ತಿದ್ದು, ಇದರಿಂದಾಗಿ ಸಮಾಜಕ್ಕೆ ಅನ್ಯಾಯ ಆಗುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾ ಹಿಂದೂ ಮುಕ್ರಿ ಸಂಘದ ಗೌರವಾಧ್ಯಕ್ಷ ಎನ್ ಆರ್ ಮುಕ್ರಿ ಆರೋಪಿಸಿದ್ದಾರೆ.
ಈ ಕುರಿತು ಕಲಭಾಗ ಗ್ರಾ.ಪಂ ಅಧ್ಯಕ್ಷರು ಹಾಗೂ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಹಂದಿಗೋಣ ಗ್ರಾಮದ ಸರ್ವೇ ನಂ . 218 /2 ಈ ಹಿಂದೆ ದೇವಗಿರಿ ಮಂಡಳ ಪಂಚಾಯತ ರಚನೆ ವೇಳೆಯಲ್ಲಿ ಹಂದಿಗೋಣ ಗ್ರಾಮವು ದೇವಗಿರಿ ಮಂಡಳ ಪಂಚಾಯತ ವ್ಯಾಪ್ತಿಯಲ್ಲಿ ಒಳಪಟ್ಟಿದ್ದರಿಂದ ದೇವಗಿರಿ ಪಂಚಾಯತ ಎಂದು ದಾಖಲಾಗಿದೆ.ಗ್ರಾ.ಪಂ. ರಚನೆಯಾದ ನಂತರ ಹಂದಿಗೋಣ ಗ್ರಾಮವು ಕಲಭಾಗ ಪಂಚಾಯತ ವ್ಯಾಪ್ತಿಯಲ್ಲಿ ಒಳಪಡುವುದರಿಂದ ಕಲಭಾಗ ಗ್ರಾಮ ಪಂಚಾಯತದ ಹೆಸರನ್ನು ಈಗಿನ ರಕಾರ್ಡ್ ನಲ್ಲಿ ದಾಖಲಾಗಬೇಕಾಗಿದೆ.ಅಕ್ಟೋಬರ್ 26 2015 ರಂದು ನಡೆದ ಸಭೆಯಲ್ಲಿ ಹಂದಿಗೋಣ ಗ್ರಾಮದ ಸರ್ವೆ ನಂ . 218 / 2 ಆ. ಇದರಲ್ಲಿ ದೇವಗಿರಿ ಸಂಚಾಯತ ಹೆಸರನ್ನು ಕಡಿಮೆ ಮಾಡಿ ಕಲಭಾಗ ಗ್ರಾಮ ಪಂಚಾಯತದ ಹೆಸರನ್ನು ದಾಖಲಿಸಬೇಕೆಂದು ನಿರ್ಣಯಿಸಲಾಗಿತ್ತು. ಈ ಕುರಿತು ತಹಶೀಲ್ದಾರ ಕುಮಟಾರವರಿಗೆ ಪತ್ರ ಬರೆಯಲಾಗಿತ್ತು. ಆದರೆ ಈ ವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಆರೋಪಿಸಿದ ಅವರು, 2021 ಫೆಬ್ರವರಿ 20 ರಂದು ನಡೆದ ಗ್ರಾಮ ಪಂಚಾಯತ ಸಭೆಯಲ್ಲಿ ಈ ಸಂಬಂಧ ಲಿಖಿತ ಮನವಿಯನ್ನು ನೀಡಲಾಗಿದೆ. ಸಭೆಯಲ್ಲಿ ಚರ್ಚೆ ಕೂಡ ನಡೆಸಲಾಗಿದೆ. ಆದರೂ ಕ್ರಮ ಕೈಗೊಂಡ ಬಗ್ಗೆ ಬರಹ ನೀಡಿರುವುದಿಲ್ಲ. ಈ ದಾಖಲಾತಿ ಸರಿಪಡಿಸದೇ ಸಮಾಜ ಮಂದಿರದ ಹೊಸ ಕಟ್ಟಡಕ್ಕೆ ಮಂಜೂರಾತಿ ದೊರೆಯುತ್ತಿಲ್ಲ.ಜೊತೆಗೆ ದುರಸ್ತಿಯೂ ಆಗುತ್ತಿಲ್ಲ.ಈಗ ಯಾವುದೇ ಯೋಜನೆಯನ್ನು ರೂಪಿಸದೇ ಸಮಾಜ ಮಂದಿರ ಬೀಳುವ ಹಂತ ತಲುಪಿದೆ.ಇದರಿಂದ ಅನುಸೂಚಿತ ಜಾತಿಗಳ ಮತ್ತು ಬೇಡಿಕೆ ಬಗ್ಗೆ ನಿರ್ಲಕ್ಷವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಕಂಡುಬರುತ್ತದೆ.
ಜಿಲ್ಲಾ ಪಂಚಾಯತದಿಂದ 10.00 ಲಕ್ಷ ರೂಪಾಯಿ ಸಮಾಜ ಮಂದಿರದ ಹೊಸಕಟ್ಟಡಕ್ಕೆ ಮಂಜೂರಾಗಿದ್ದು ಸ್ಥಳದ ದಾಖಲೆಯು ಬದಲಾವಣೆಯಾಗದೇ ಸಮಾಜ ಕಲ್ಯಾಣ ಇಲಾಖೆಗೆ ಪರಿವರ್ತನೆಯಾಗದೇ ಇರುವುದರಿಂದ ಕಟ್ಟಡ ನಿರ್ಮಾಣ ಸ್ಥಗಿತಗೊಂಡಿದ್ದು, ಇದರಿಂದಾಗಿ ಹಿಂದುಳಿದ ನಮ್ಮ ಸಮಾಜಕ್ಕೆ ಅನ್ಯಾಯವಾಗಿರುತ್ತದೆ.ಇದು ಅನುಸೂಚಿತ ಜಾತಿ ಅನುಸೂಚಿತ ಪಂಗಡ ದೌರ್ಜನ್ಯ ಪ್ರತಿಬಂಧಕ ಅಧಿನಿಯಮ 1995 ಕಲಂ 4 ( 1 ) ರ ಪ್ರಕಾರ ಅಪರಾಧವಾಗಿರುತ್ತದೆ.
ಹೀಗಾಗಿ ತಕ್ಷಣ ನಮಗೆ ಸೂಕ್ತ ಕ್ರಮ ಕೈಗೊಂಡ ಬಗ್ಗೆ ಹಿಂಬರಹ ನೀಡಬೇಕು.ಇಲ್ಲವಾದಲ್ಲಿ ಕಾನೂನಿನಡಿಯಲ್ಲಿ ಹೋರಾಟ ಮಾಡಬೇಕಾಗಿರುತ್ತದೆ ಎಂದು ಮನವಿಯ ಮೂಲಕ ತಿಳಿಸಿದ್ದಾರೆ