• Slide
    Slide
    Slide
    previous arrow
    next arrow
  • ಕಳಚೆ ಭಾಗದ ಜನರ ಸ್ಥಿತಿ ಅಪಾಯದಲ್ಲಿ, ಸ್ಥಳಾಂತರವೇ ಸೂಕ್ತ; ಸ್ವರ್ಣವಲ್ಲೀ ಶ್ರೀ

    300x250 AD

    ಯಲ್ಲಾಪುರ: ತಾಲೂಕಿನ ಕಳಚೆಯಲ್ಲಿ ಕಳೆದ ಎರಡು ತಿಂಗಳ ಹಿಂದೆ ಪ್ರಕೃತಿ ವಿಕೋಪದಿಂದ ಇಡೀ ಊರೇ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಜನರಿಗೆ ಇಲ್ಲಿ ಮುಂದಿನ ದಿನಗಳಲ್ಲಿ ಬದುಕುವ ಯಾವುದೇ ಭರವಸೆ ಕಂಡುಬರುತ್ತಿಲ್ಲ. ಆದ್ದರಿಂದ ಇಲ್ಲಿನ ಎಲ್ಲರನ್ನೂ ಸರ್ಕಾರ ಬೇರೆಡೆ ಸ್ಥಳಾಂತರಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು.


    ಅವರು ಸೆ.23 ರಂದು ತಾಲೂಕಿನ ಕಳಚೆಯ ಶ್ರೀಲಕ್ಷ್ಮೀನರಸಿಂಹ ದೇವಸ್ಥಾನದ ಸಭಾಭವನದಲ್ಲಿ ಶ್ರೀಮಠದಿಂದ ಸಂಗ್ರಹಿಸಿದ ಪರಿಹಾರಧನದ ಪ್ರಸಾದರೂಪದ ಚೆಕ್‍ನ್ನು ವಿತರಿಸಿ, ಆಶೀರ್ವಚನ ನೀಡುತ್ತಿದ್ದರು.


    ಪೂಜ್ಯರು ಕಳಚೆಯ ಅನೇಕ ಕಡೆ ಗುಡ್ಡ ಕುಸಿದ ಸ್ಥಿತಿಯನ್ನು ವೀಕ್ಷಿಸಿ, ನಂತರ ಬೃಹತ್ ಸಂಖ್ಯೆಯಲ್ಲಿ ಸೇರಿದ ಸಭೆಯನ್ನುದ್ದೇಶಿಸಿ, ತಮ್ಮ ಆಶೀರ್ವಚನದಲ್ಲಿ ಈ ಪ್ರದೇಶ ವಾಸಕ್ಕೆ ಯೋಗ್ಯವಲ್ಲ. ಸರ್ಕಾರದ ಮತ್ತು ಖಾಸಗಿ ತಜ್ಞರು ಸಲಹೆ ನೀಡಿದ್ದಾರೆ. ತಾತ್ಕಾಲಿಕವಾಗಿ 15-20 ಕುಟುಂಬಗಳು ತೊಂದರೆಯಲ್ಲಿ ಸಿಲುಕಿದ್ದರೂ, ಮುಂಬರುವ ದಿನಗಳಲ್ಲಿ ಉಳಿದ ನಾಗರಿಕರಿಗೆ ಅಪಾಯದ ಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ. ಆದ್ದರಿಂದ ತಜ್ಞರ ಅಭಿಮತದಂತೆ ಈ ಊರನ್ನು ಬೇರೆಡೆ ಸ್ಥಳಾಂತರಿಸಬೇಕು. ಪ್ರತಿ ಕುಟುಂಬದವರಿಗೂ ಅಗತ್ಯವಾದ ಕೃಷಿ ಜಮೀನು, ಪರಿಹಾರಧನವನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದ ಶ್ರೀಗಳು, ನೀವೆಲ್ಲರೂ ಒಗ್ಗಟ್ಟಿನಿಂದ ಸಂಘಟಿತರಾಗಿ ಹೋರಾಟ ನಡೆಸಬೇಕಾದ ಸ್ಥಿತಿ ನಿರ್ಮಾಣಗೊಂಡರೂ ಅನಿವಾರ್ಯವಾಗಿ ನಿಮ್ಮ ಬದುಕಿಗಾಗಿ ಹೋರಾಡಬೇಕು. ನಿಮ್ಮ ಜೊತೆಯಲ್ಲಿ ಶ್ರೀಮಠ ಇರುತ್ತದೆ. ನಿಮ್ಮ ಮಠದ ನಿಷ್ಠೆ ಅಚಲವಾದುದು. ಆದರೆ ನೀವು ದೇವರ ನಿಷ್ಠೆ, ದೈವಿಕ ಚಿಂತನೆ ನಡೆಸಲೇಬೇಕು. ದೇವರ ಅನುಗ್ರಹವಿದ್ದರೆ ಎಂತಹ ಕಷ್ಟಗಳು ಕೂಡ ನಿಮ್ಮಿಂದ ದೂರವಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿಯೇ ಜುಲೈ 23 ರಂದು ನಡೆದ ಭೀಕರ ಅತಿವೃಷ್ಟಿಯ ವರದಿ ಗಮನಿಸಿದ ನಾವು, ಶ್ರೀಮಠದ ದೇವರಲ್ಲಿ ಪ್ರಾರ್ಥಿಸಿದ್ದೇವೆ. ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿ ಕೂಡಿ ಕೆಲಸ ಮಾಡಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಾಧ್ಯ ಎಂದರು.

    300x250 AD


    ಕೊಡಗಿನಲ್ಲಿ ಎರಡು ವರ್ಷಗಳ ಹಿಂದೆ ಆದ ಅನಾಹುತದಂತೆ ಇಲ್ಲಿಯೂ ಆಗಿದೆ. ಆದರೆ ಅಷ್ಟು ಪ್ರಚಾರ ದೊರೆಯಲಿಲ್ಲ. ಮುಖ್ಯಮಂತ್ರಿಗಳು ತಕ್ಷಣ ಇಲ್ಲಿ ಬಂದು ಹೋಗಿರುವದರಿಂದ ದೇಶದ ಗಮನ ಸ್ವಲ್ಪಮಟ್ಟಿಗೆ ಸೆಳೆಯಲು ಸಾಧ್ಯವಾಗಿದೆ. ಆದ್ದರಿಂದ ನಮ್ಮ ಉಸ್ತುವಾರಿ ಸಚಿವರನ್ನೇ ಹೋರಾಟ ಸಮಿತಿಯ ಅಧ್ಯಕ್ಷರನ್ನಾಗಿ ನಾವು ಮಾಡಲು ಸೂಚಿಸಿದ್ದೇವೆ. ನಮ್ಮ ಹೋರಾಟ ಸರ್ಕಾರದ ವಿರುದ್ಧವಲ್ಲ. ನಮ್ಮ ಬೇಡಿಕೆಗಾಗಿ ಮಾತ್ರ. ಆದ್ದರಿಂದ ಭೂತಾಯಿಯನ್ನು ಎಲ್ಲರೂ ಪೂಜಿಸಬೇಕು. ಅದರ ಅನುಗ್ರಹವಿದ್ದರೆ ನಮಗೆ ಎಲ್ಲವೂ ಸಿದ್ಧಿಸುತ್ತದೆ ಎಂದರು.


    ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ, ಶ್ರೀಮಠದ ಆಡಳಿತ ಸಮಿತಿ ಸದಸ್ಯ ವೆಂಕಟರಮಣ ಬೆಳ್ಳಿ, ಗ್ರಾ.ಪಂ ಸದಸ್ಯ ಗಜಾನನ ಭಟ್ಟ ಅಂದಿನಿಂದ ಇಲ್ಲಿಯವರೆಗಿನ ಸ್ಥಿತಿಗತಿ ಮತ್ತು ಹೋರಾಟದ ಕುರಿತು ಮಾತನಾಡಿದರು.


    ಶ್ರೀಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಕಾರ್ಯದರ್ಶಿ ಗಣಪತಿ ಹೆಗಡೆ ಗೊಡವೆಮನೆ, ಆಡಳಿತ ಮಂಡಳಿ ನಿರ್ದೇಶಕರಾದ ಮಾದೇವ ಹೆಗಡೆ ಗಡಿಕೈ, ಎಂ.ಆರ್.ಹೆಗಡೆ ಮತ್ತೀಗಾರ, ಆರ್.ಎಸ್.ಹೆಗಡೆ ಭೈರುಂಬೆ, ಎನ್.ಜಿ.ಹೆಗಡೆ ಭಟ್ರಕೇರಿ, ಜಿ.ಎನ್.ಹೆಗಡೆ ಹಿರೇಸರ, ಡಿ.ಶಂಕರ ಭಟ್ಟ ಯಲ್ಲಾಪುರ, ಶ್ರೀಮಠದ ವ್ಯವಸ್ಥಾಪಕ ಎಸ್.ಎನ್.ಗಾಂವ್ಕರ್, ಸೀಮಾಧ್ಯಕ್ಷ ನಾಗರಾಜ ಹೆಗಡೆ ಉಪಸ್ಥಿತರಿದ್ದರು.
    ಉಮೇಶ ಭಾಗ್ವತ ಸ್ವಾಗತಿಸಿದರು. ಶ್ರೀಪಾದ ಉಪಾಧ್ಯಾಯ ನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top