• Slide
  Slide
  Slide
  previous arrow
  next arrow
 • ಉತ್ತರ ಕನ್ನಡ ಜಿಲ್ಲೆಗೊಂದು ವಿಶ್ವ ವಿದ್ಯಾಲಯ ಅಗತ್ಯ; ಸರ್ಕಾರಕ್ಕೆ ಒತ್ತಾಯಿಸಿದ ಶಾಸಕ ದಿನಕರ ಶೆಟ್ಟಿ

  300x250 AD

  ಕುಮಟಾ: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಇದೀಗ 75 ವರ್ಷ. ದೇಶಾದ್ಯಂತ ಕೇಂದ್ರ ಸರಕಾರ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಆದರೆ ಈವರೆಗೂ ನಮ್ಮ ಉತ್ತರಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ವಿಶ್ವ ವಿದ್ಯಾನಿಲಯ ಇಲ್ಲದಿರುವುದು ವಿಷಾದನೀಯ ಸಂಗತಿ. ಉತ್ತರಕನ್ನಡ ಬಹಳ ನಿರ್ಲಕ್ಷಕ್ಕೆ ಒಳಗಾಗುತ್ತಿರುವ ಜಿಲ್ಲೆಯಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಬೇಸರ ವ್ಯಕ್ತಪಡಿಸಿದರಲ್ಲದೇ ವಿಶ್ವ ವಿದ್ಯಾನಿಲಯ ನಿರ್ಮಾಣ ಮಾಡುವಂತೆ ಸರಕಾರ ಹಾಗೂ ಸಚಿವರನ್ನು ಒತ್ತಾಯಿಸಿದರು.

  ವಿಧಾನಸೌಧದಲ್ಲಿ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಬುಧವಾರ ಮಾತನಾಡಿದ ಅವರು,” ಉತ್ತರಕನ್ನಡ ಜಿಲ್ಲೆಯಲ್ಲಿ ಶೇ.100 ಕ್ಕೆ 98 ಸಾಕ್ಷರತೆ ಪ್ರಮಾಣವಿದ್ದು, ಈ ಕಾರಣಕ್ಕೆ ನಮ್ಮ ಜಿಲ್ಲೆಯಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪನೆ ಅತ್ಯಗತ್ಯವಾಗಿದೆ. ಅಲ್ಲದೇ ನಮ್ಮ ಜಿಲ್ಲೆ ಎಲ್ಲಾ ವಿಷಯಗಳಲ್ಲಿಯೂ ಬಹಳ ನಿರ್ಲಕ್ಷಕ್ಕೆ ಒಳಗಾಗುತ್ತಿರುವ ಜಿಲ್ಲೆಯಾಗಿದ್ದು, ರಾಜ್ಯದ ಉಳಿದ ಜಿಲ್ಲೆಗಳಲ್ಲಿ 2 ರಿಂದ 3 ವಿಶ್ವವಿದ್ಯಾಲಯಗಳಿವೆ. ವಿಶ್ವವಿದ್ಯಾಲಯಕ್ಕೆ ಜಾಗಬೇಕಾದರೆ ಕರ್ನಾಟಕ ಇಂಡಸ್ಟ್ರೀಯಲ್ ಬೋರ್ಡ್‍ನ 1800 ಎಕರೆ ಜಾಗ ಖಾಲಿ ಬಿದ್ದಿದೆ. ಅದರಲ್ಲಿ ಸುಮಾರು 100 ಎಕರೆ ಜಮೀನು ಪಡೆದು ಅಲ್ಲಿ ನಿರ್ಮಾಣ ಮಾಡಲು ಅವಕಾಶವಿದೆ. ಇನ್ನು ತಾವು ಸಹ ನಮ್ಮ ಜಿಲ್ಲೆಯವಾಗಿದ್ದೀರಿ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ, ವಿಶ್ವ ವಿದ್ಯಾಲಯ ಸ್ಥಾಪನೆಗೆ ಮುತುವರ್ಜಿ ವಹಿಸಿ “ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ವಿನಂತಿಸಿದರು.

  ಉತ್ತರಕನ್ನಡ ಜಿಲ್ಲೆಯಲ್ಲಿ ವಿಶ್ವ ವಿದ್ಯಾಲಯ ಸ್ಥಾಪನೆ ಕುರಿತು ಸದನದಲ್ಲಿ ಶಾಸಕ ದಿನಕರ ಶೆಟ್ಟಿ ಮಾತನಾಡುವಾಗ ಜಿಲ್ಲೆಯ ಕರಾವಳಿ ಭಾಗದ ಶಾಸಕರುಗಳಾದ, ಭಟ್ಕಳ ಶಾಸಕ ಸುನೀಲ್ ನಾಯ್ಕ ಹಾಗೂ ಕಾರವಾರ ಶಾಸಕಿ ರೂಪಾಲಿ ನಾಯ್ಕ ಕುಮಟಾ ಶಾಸಕರ ಪ್ರಶ್ನೆಗೆ ಬೆಂಬಲ ಸೂಚಿಸಿದರು.

  ಶಾಸಕರ ಪ್ರಶ್ನೆಗೆ ಶಿಕ್ಷಣ ಸಚಿವರ ಅನುಪಸ್ಥಿತಿಯಲ್ಲಿ ಪ್ರತಿಕ್ರಿಯಿಸಿದ ಇಂಧನ ಸಚಿವ ಸುನಿಲ್ ಕುಮಾರ್ ,” ಜಿಲ್ಲೆಗೆ ವಿಶ್ವವಿದ್ಯಾಲಯ ನೀಡುವಂತೆ ಉಲ್ಲೇಖಿಸಿದ್ದಾರೆ. ಈಗಾಗಲೇ ಮನವಿಗಳನ್ನು ಆಧರಿಸಿ ಕಾರವಾರದ ಕೋಡಿಭಾಗದಲ್ಲಿ ಒಂದು ಸ್ನಾತಕೋತ್ತರ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ಅಲ್ಲಿ 108 ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜಿಲ್ಲೆಗೊಂದು ವಿಶ್ವವಿದ್ಯಾನಿಲಯವನ್ನೇ ಮಾಡಬೇಕು ಎಂಬ ಪ್ರಸ್ಥಾವನೆ ಸರಕಾರದ ಮುಂದೆ ಇಲ್ಲ. ಮುಂದಿನ ದಿನಗಳಲ್ಲಿ ಅದು ನಮ್ಮ ಗಮನಕ್ಕೆ ಬಂದಲ್ಲಿ ಪರಿಶೀಲನೆ ಮಾಡಲಾಗುವುದು “ಎಂದರು.

  300x250 AD

  ಈ ವೇಳೆ ಶಾಸಕರುಗಳಿಗೆ ಸಹಮತ ಸೂಚಿಸುವಂತೆ ಮಧ್ಯಪ್ರವೇಶಿಸಿದ ಶಾಸಕ ಕುಮಾರ ಬಂಗಾರಪ್ಪ,” ನಳಂದ ವಿಶ್ವವಿದ್ಯಾಲಯದಷ್ಟೇ ಬನವಾಸಿ ಯುನಿರ್ವಸಿಟಿಗೆ ಇತಿಹಾಸವಿತ್ತು. ಆದರೆ ನಮ್ಮ ನಿರ್ಲಕ್ಷ್ಯದಿಂದ ಅದನ್ನು ಕಳೆದುಕೊಂಡಿದ್ದೇವೆ. ಕನ್ನಡದ ಮೊಟ್ಟಮೊದಲ ರಾಜಮನೆತನ ಕದಂಬರ ಹೆಸರಿನಲ್ಲಿ ಒಂದು ಯುನಿರ್ವಸಿಟಿ ಸ್ಥಾಪನೆ ಮಾಡಲು ಕ್ರಮ ವಹಿಸಿ “ಎಂದು ಸರ್ಕಾರವನ್ನು ಆಗ್ರಹಿಸಿದರು.

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾದ ಶಾಸಕ ದಿನಕರ ಶೆಟ್ಟಿ,” ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿಶ್ವ ವಿದ್ಯಾಲಯಗಳಿದ್ದರೂ, ಉತ್ತರಕನ್ನಡ ಜಿಲ್ಲೆಯಲ್ಲಿ ಇಲ್ಲ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ, ಶಿಕ್ಷಣ ಕ್ಷೇತ್ರಕ್ಕೆ ಅನುಕೂಲ ಕಲ್ಪಿಸಬೇಕು “ಎಂದು ವಿಶ್ವ ವಿದ್ಯಾಲಯ ಸ್ಥಾಪನೆ ಕುರಿತು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದರು.

  ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ,” ಪ್ರಸ್ತಾವನೆ ಸಲ್ಲಿಸಿ, ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಹೆಚ್ಚಿನ ಆಸಕ್ತಿ ವಹಿಸಿ ಕ್ರಮ ಕೈಗೊಳ್ಳಲಾಗುತ್ತದೆ “ಎಂದು ಭರವಸೆ ನೀಡಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top