ನವದೆಹಲಿ: ಕೃಷಿ ಉತ್ಪನ್ನಗಳ ರಫ್ತು ಹೆಚ್ಚಿನ ಉತ್ತೇಜನ ಪಡೆಯುತ್ತಿದ್ದು, ಭಾರತವು 2020-21ರ ಏಪ್ರಿಲ್-ಆಗಸ್ಟ್‌ಗೆ ಹೋಲಿಸಿದರೆ 2021-22ರ ಈ ಅವಧಿಯಲ್ಲಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತಿನಲ್ಲಿ ಶೇ.21.8 ರಷ್ಟು ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದೆ.
ಡೈರೆಕ್ಟರೇಟ್ ಜನರಲ್ ಆಫ್ ಕಮರ್ಷಿಯಲ್ ಇಂಟೆಲಿಜೆನ್ಸ್ ಅಂಡ್ ಸ್ಟ್ಯಾಟಿಸ್ಟಿಕ್ಸ್ (ಡಿಜಿಸಿಐ ಮತ್ತು ಎಸ್) ಬಿಡುಗಡೆ ಮಾಡಿದ ತ್ವರಿತ ಅಂದಾಜುಗಳ ಪ್ರಕಾರ, ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ಉತ್ಪನ್ನಗಳ ಒಟ್ಟು ರಫ್ತುಗಳು 2020ರ ಏಪ್ರಿಲ್-ಆಗಸ್ಟ್‌ನ 6,485 ಮಿಲಿಯನ್ ಡಾಲರ್‌ನಿಂದ 2021ರ ಏಪ್ರಿಲ್-ಆಗಸ್ಟ್‌ನಲ್ಲಿ 7,902 ಮಿಲಿಯನ್ ಡಾಲರ್‌ಗೆ ವೃದ್ಧಿಯಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತುಗಳಲ್ಲಿನ ದೊಡ್ಡ ಜಿಗಿತವು 2020-21ರ ಆರ್ಥಿಕ ವರ್ಷದಲ್ಲಿ ಕಂಡುಬಂದ ರಫ್ತುಗಳ ಬೆಳವಣಿಗೆಯ ಮುಂದುವರಿಕೆಯಾಗಿದೆ. ಡಬ್ಲ್ಯುಟಿಒ ಟ್ರೇಡ್ ಮ್ಯಾಪ್ ಪ್ರಕಾರ, ಭಾರತವು 2019 ನೇ ಸಾಲಿನಲ್ಲಿ ಒಟ್ಟು 37 ಬಿಲಿಯನ್ ಡಾಲರ್ ಕೃಷಿ ರಫ್ತಿನೊಂದಿಗೆ 9 ನೇ ಸ್ಥಾನದಲ್ಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.