ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳು ವಿದೇಶದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ನಡೆಸಲು ವಿಶೇಷ ಯೋಜನೆಯನ್ನು ಜಾರಿಗೊಳಿಸಿದ್ದು, ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಮಂಡಳಿ ಭರಿಸಲಿದೆ ಹಾಗೂ ಕಾರ್ಮಿಕರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಸರ್ವೇ ಮಾಡುವುದಕ್ಕೆ ಇಂದಿನ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಸಚಿವ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಕಾರ್ಮಿಕ ಕಲ್ಯಾಣ ಸುರಕ್ಷಾ ಭವನದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಭೆ ನಡೆಸಿ ಮಾತನಾಡುತ್ತಿದ್ದರು. ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಅನ್ನು ನೀಡಲು ತೀರ್ಮಾನಿಸದರು ಹಾಗೂ 100 ಶಿಶುಪಾಲನ ಕೇಂದ್ರವನ್ನು ಸ್ಥಾಪಿಸುವ ಯೋಜನೆಯನ್ನು ಪ್ರಾದೇಶಿಕವಾರು ಅನುಷ್ಠಾನಗೊಳಿಸುವುದರ ಕುರಿತು ಹಾಗೂ ಪುಡ್ ಕಿಟ್, ಸುರಕ್ಷಾ ಕಿಟ್, ನ್ಯೂಟ್ರಿಷನ್ ಕಿಟ್ ವಿತರಿಸುವ ಬಗ್ಗೆ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.
2016 ರಿಂದ ಇಲ್ಲಿಯವರೆಗೂ ಬಾಕಿಯಿಂದ ಅರ್ಜಿಗಳನ್ನು ವಿಲೇವಾರಿ ಮಾಡಲು ಸಚಿವ ಶಿವರಾಮ ಹೆಬ್ಬಾರ್ ಆಯೋಜಿಸಿದ್ದ ‘ಕಾರ್ಮಿಕ ಅದಾಲತ್’ ಬಗ್ಗೆ ಮಂಡಳಿಯ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಮಿಕ ಅದಾಲತ್ ಮೂಲಕವಾಗಿ 71 ಕೋಟಿ ರೂಪಾಯಿಗಳ ಸೌಲಭ್ಯಗಳನ್ನು ಮಂಜೂರಿ ಮಾಡಲಾಗಿದೆ ಕಾರ್ಮಿಕ ಖಾತೆಗೆ ನೇರವಾಗಿ ಯೋಜನೆಯ ಸಹಾಯ ಧನ ಜಮೆಯಾಗಲಿದೆ.
ಈ ಸಭೆಯಲ್ಲಿ ಕಾರ್ಮಿಕ ಆಯುಕ್ತ ಅಕ್ರಂ ಪಾಷಾ ಕಾರ್ಮಿಕ ಕಲ್ಯಾಣ ಮಂಡಳಿ ನಿರ್ದೇಶಕ ನಾಗನಾಥ, ಪ್ರಕಾಶ ಎಮ್, ನಾಡಗೇರ್ ಹಾಗೂ ಶಿವಾನಿ ಭಟ್ಕಳ, ಆರ್ಥಿಕ ಇಲಾಖೆ ಅಧಿಕಾರಿಗಳು, ಕೇಂದ್ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯ ಪ್ರತಿನಿಧಿಗಳು ಕಾರ್ಮಿಕ ಸಂಘಟನೆಗಳ ಪ್ರಮುಖರು ಹಾಜರಿದ್ದರು.