ಅಂಕೋಲಾ: ಇಲ್ಲಿನ ಅಲಗೇರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾರಣವಾಗಿ ಭೂಮಿ ಕಳೆದಯಕೊಳ್ಳುವ ನಿರಾಶ್ರಿತರಿಗೆ ಪುನರ್ವಸತಿ ಹಾಗೂ ಪರಿಹಾರದ ಮೊತ್ತದ ಕುರಿತು ಸ್ಪಷ್ಟ ಮಾಹಿತಿ ನೀಡದೇ ಒಕ್ಕಲೆಬ್ಬಿಸಲು ಪ್ರಯತ್ನ ಮಾಡಿದರೆ ಆ ಎಲ್ಲ ಕುಟುಂಬದವರು ಅನಿರ್ದಿಷ್ಟಾವಧಿ ಹೋರಾಟ ಮಾಡಬೇಕಾಗುತ್ತದೆ ಎಂದು ನಿರಾಶ್ರಿತರ ಪರವಾಗಿ ಸುರೇಶ ನಾಯಕ ಅಲಗೇರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಅಲಗೇರಿಯಲ್ಲಿ ಉದ್ದೇಶಿತ ನಾಗರಿಕ ವಿಮಾನ ನಿಲ್ದಾಣದ ಸರ್ವೇ ಕಾರ್ಯ ಬಹುತೇಕ ಮುಕ್ತಾಯವಾಗಿದೆ. ನಿರಾಶ್ರಿತರಾಗುವ ಕುಟುಂಬಕ್ಕೆ ಈಗಾಗಲೇ ನೊಟೀಸ್ ನೀಡಲಾಗಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ. ಜಿಲ್ಲಾಡಳಿತ ದುರುದ್ದೇಶಪೂರ್ವಕವಾಗಿ ನಮ್ಮನ್ನೆಲ್ಲ ನಿರ್ಗತಿಕರನ್ನಾಗಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರಿಗೆ ಈಗಾಗಲೇ ನೊಟೀಸ್ ನೀಡಿ 30 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ತಿಳಿಸಿದ್ದಾರೆ. ಆದರೆ ಈ ನೊಟೀಸಿನಲ್ಲಿ ಒಳಗೊಂಡಿರುವ ಯಾವುದೇ ಮಾಹಿತಿಯನ್ನು ನಾಗರಿಕರಿಗೆ ಕೊಟ್ಟಿಲ್ಲ. ಯಾವುದೇ ಮಾಹಿತಿ ಕೊಡದೆ ಏಕಾಏಕಿ ಸರ್ವೆ ಕಾರ್ಯದ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
ನಿರಾಶ್ರಿತರಾಗುವ ಗ್ರಾಮಸ್ಥರ ಬೇಡಿಕೆ ಆಲಿಸಿ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಪರಿಹರಿಸಿ ಕೊಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಅಂಕೋಲಾ-ಕಾರವಾರ ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ಮಾಡಿ ಸಂಪೂರ್ಣ ಮಾಹಿತಿ ನೀಡಬೇಕು. ಒಂದು ವೇಳೆ ಇದನ್ನು ಬೇರೆ ರೀತಿಯಲ್ಲಿ ಕಾರ್ಯಗತಗೊಳಿಸಲು ಹೊರಟರೆ ಸಾಮೂಹಿಕವಾಗಿ ಹೋರಾಟದೊಂದಿಗೆ ಅನಿರ್ದಿಷ್ಟಾವಧಿಯವರೆಗೆ ಮುಷ್ಕರ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.