ಬೆಂಗಳೂರು: ರಾಜ್ಯದ ಹಳ್ಳಗಳು, ತೊರೆಗಳಲ್ಲಿ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್‍ಗೆ ಅನುಕೂಲವಾಗುವಂತಹ ಮರಳು ನೀತಿಯನ್ನು ಅನುಷ್ಠಾನಕ್ಕೆ ತರುವ ಸಂಬಂಧ ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಗ್ರಾಮೀಣ ಭಾಗದಲ್ಲಿನ ಮರಳು ಸಮಸ್ಯೆ ಪರಿಹಾರಕ್ಕೆ ಪೂರಕವಾದ ಕ್ರಮ ಕೈಗೊಳ್ಳಲಾಗುವುದು. ಆ ಮೂಲಕ ಮರಳು ಲಭ್ಯತೆ ಬಗ್ಗೆ ಇರುವ ಗೊಂದಲಗಳಿಗೆ ಪರಿಹಾರ ನೀಡಲು ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಸುಮಾರು 4.50 ಕೋಟಿ ಟನ್‍ಗಳಷ್ಟು ಮರಳಿನ ಬೇಡಿಕೆ ಇದೆ. ಪ್ರಸ್ತುತ 3.50 ಕೋಟಿ ಟನ್ ಉತ್ಪಾದನೆಯಾಗುತ್ತಿದೆ. ಮರಳಿನ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಹಳ್ಳ, ತೊರೆಗಳಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆಯೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.