ಬೆಂಗಳೂರು: ರಾಜ್ಯದ ಅಗತ್ಯಕ್ಕೆ ಬೇಕಾದ ಮೀನು ಮರಿಗಳ ಉತ್ಪಾದನೆಯನ್ನು ರಾಜ್ಯದಲ್ಲಿಯೇ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವ ಅಂಗಾರ ತಿಳಿಸಿದ್ದಾರೆ.
ಅವರು ದಾವಣಗೆರೆಯ ಹರಿಹರ ತಾಲೂಕಿನ ಕೊಂಡಜ್ಜಿಯಲ್ಲಿರುವ ಮೀನು ಮರಿ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದರು.
ರಾಜ್ಯಕ್ಕೆ ಬೇಕಾದ ಮೀನು ಮರಿಗಳ ಉತ್ಪಾದನೆಯನ್ನು ರಾಜ್ಯದಲ್ಲೇ ಮಾಡುವ ಮೂಲಕ ಆಮದು ತಪ್ಪಿಸಬೇಕು. ಇದರಿಂದ ಮೀನು ಕೃಷಿಗೂ ಉತ್ತೇಜನ ದೊರೆಯುತ್ತದೆ. ಅದರೊಂದಿಗೆ ಉದ್ಯೋಗಾವಕಾಶವೂ ಹೆಚ್ಚಳವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹಾಗೆಯೇ ರಾಜ್ಯದ ಎಲ್ಲಾ ಮೀನು ಮರಿ ಪಾಲನಾ ಕೇಂದ್ರಗಳ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಮೀನು ಸಾಕುವವರಿಗೂ ಉತ್ತೇಜನ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ಸಣ್ಣ ಕೆರೆಗಳು, ಚಿಕ್ಕ ಪ್ರದೇಶಗಳಲ್ಲಿ ಮೀನು ಮರಿ ಸಾಕುವವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಗುತ್ತದೆ ಎಂದು ನುಡಿದರು.