ಮೈಸೂರು: ಕೊರೋನಾ 3ನೇ ಅಲೆಯ ಭೀತಿ ನಡುವೆ ಈ ಬಾರಿ ಆಯೋಜಿಸಲಾಗಿರುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲೆಂದು ಕಾಡಿನಿಂದ ಅರಮನೆ ನಗರಿ ಮೈಸೂರಿನ ಅಂಬಾವಿಲಾಸ ಅರಮನೆಗೆ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ಮರಳಿನ ಭಾರದ ಮೂಟೆ ಹೊರಿಸುವ ತಾಲೀಮನ್ನು ಸೋಮವಾರ ಪ್ರಾರಂಭಿಸಲಾಯಿತು.
ಬೆಳಗ್ಗೆ 11.30ರ ವೇಳೆಯಲ್ಲಿ ಗಜಪಡೆಯನ್ನು ಅರಮನೆ ಆವರಣದಲ್ಲಿ ನಿಲ್ಲಿಸಿ, ಸಾಂಪ್ರಾದಾಯಿಕ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಸುಮಾರು 400 ರಿಂದ 500 ಕೆಜಿ ಮರಳು ತುಂಬಿದ ಮೂಟೆಯನ್ನು ಅಭಿಮನ್ಯು ಬೆನ್ನಿನ ಮೇಲೆ ಏರಿಸಲಾಯಿತು. ಬಳಿಕ ಅದನ್ನು ಆತನ ಬೆನ್ನಿಗೆ ಕಟ್ಟಿ ತಾಲೀಮು ಆರಂಭಿಸಲಾಯಿತು. ಅರಮನೆಯ ಆವರಣದಲ್ಲಿ ಜಂಬೂಸವಾರಿ ಹಾದು ಹೋಗುವ ಮಾರ್ಗದಲ್ಲಿ ಅಭಿಮನ್ಯು ಸರಾಗವಾಗಿ ಮರಳಿನ ಭಾರ ಹೊತ್ತು ಸಾಗಿದ. ಆತನಿಗೆ ಧನಂಜಯ, ಗೋಪಾಲಸ್ವಾಮಿ, ಅಶ್ವತ್ಥಾಮ ವಿಕ್ರಮ ಆನೆಗಳು ಸಾಥ್ ನೀಡಿದವು.
ಈ ವೇಳೆ ಡಿಸಿಎಫ್ ಡಾ. ಕರಿಕಾಳನ್, ವೈದ್ಯ ರಮೇಶ್, ಅರಮನೆ ಎಸಿಪಿ ಚಂದ್ರಶೇಖರ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.
ಫಿರಂಗಿಗಳಿಗೆ ಪೂಜೆ ಸಲ್ಲಿಕೆ: ಮತ್ತೊಂದೆಡೆ ಅರಮನೆ ಆವರಣದಲ್ಲಿ ಫಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆಯನ್ನು ಸಲ್ಲಿಸಲಾಯಿತು. ದಸರಾದ ಜಂಬೂಸವಾರಿ ಮೆರವಣಿಗೆ ಈ ಫಿರಂಗಿಗಳಿಂದ ಕುಶಾಲು ತೋಪು ಹಾರಿಸಲಾಗುತ್ತದೆ. ಅಲ್ಲದೇ ಮೆರವಣಿಗೆಯಲ್ಲಿ ಸಾಗುವ ಫಿರಂಗಿಗಳ ವೀಕ್ಷಕರ ಮನ ಸೆಳೆಯುತ್ತವೆ. ರಾಜ, ಮಹಾರಾಜರ ಕಾಲದಲ್ಲಿ ಫಿರಂಗಿಗಳನ್ನು ಯುದ್ಧಗಳಲ್ಲಿ ಬಳಸಲಾಗುತ್ತಿತ್ತು ಎಂಬುದನ್ನು ನೆನಪು ಮಾಡಿಕೊಡತ್ತವೆ. ಹಾಗಾಗಿ ಸಿಆರ್ ಪೆÇಲೀಸರು ಫಿರಂಗಿಗಳನ್ನು ಸ್ವಚ್ಚ ಮಾಡಿ, ಪೂಜೆಯನ್ನು ಸಲ್ಲಿಸಿದರು.