ಮುಂಡಗೋಡ: ಪಟ್ಟಣದ ಬಂಕಾಪುರ ರಸ್ತೆಯ ಪಕ್ಕದಲ್ಲಿರುವ ಹೊಸ ಓಣಿಯಲ್ಲಿ ಪಟ್ಟಣ ಪಂಚಾಯತಿ ವತಿಯಿಂದ ನೂತನ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದ್ದು, ಪಕ್ಕದಲ್ಲಿಯೇ ಸಾರ್ವಜನಿಕ ಮೂತ್ರಾಲಯ ನಿರ್ಮಿಸಲಾಗಿದೆ. ದುರಂತವೆಂದರೆ ಈ ಮೂತ್ರಾಲಯಕ್ಕೆ ಸಮರ್ಪಕ ನೀರಿನ ವ್ಯವಸ್ಥೆಯಿಲ್ಲದೇ, ಮೂತ್ರಾಲಯದ ಒಳಭಾಗ ಹಾಗೂ ಪಕ್ಕದ ಚರಂಡಿ ಗಬ್ಬುನಾರುವಂತಾಗಿದೆ.
ಸರ್ಕಾರ ಲಕ್ಷ, ಲಕ್ಷ ವ್ಯಯಿಸಿ ಈ ಸುಸಜ್ಜಿತ ಮೂತ್ರಾಲಯವನ್ನು ನಿರ್ಮಿಸಿದೆ. ಆದರೆ ಸಮರ್ಪಕ ನಿರ್ವಹಣೆಯಿಲ್ಲದೇ, ಶೌಚಾಲಯ ಗಬ್ಬು ನಾರುತ್ತಿದೆ. ಶೌಚಾಲಯದ ಒಳಭಾಗದ ಪರಿಕರಗಳು ಎಲೆ, ಅಡಕೆ, ಗುಟ್ಕಾ ಉಗುಳುವವರ ತಾಣವಾದಂತಾಗಿದೆ. ಅಲ್ಲದೇ, ಸಾರ್ವಜನಿಕ ಮೂತ್ರಾಲಯದ ಪಕ್ಕದಲ್ಲಿರುವ ಚರಂಡಿಯೂ ತ್ಯಾಜ್ಯದಿಂದ ತುಂಬಿ ತುಳುಕುವಂತಾಗಿ ಅಸ್ವಚ್ಛತೆಯ ಆಗರವಾಗಿದೆ.
ಪರಿಣಾಮ ಸುತ್ತಮುತ್ತಲ ಪ್ರದೇಶ ಗಳೆಲ್ಲವೂ ದುರ್ವಾಸನೆಯಿಂದ ಗಬ್ಬು ನಾರುತ್ತಿದ್ದು, ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆ ಕಂಡುಬರುತ್ತಿದೆ. ಶೀಘ್ರದಲ್ಲೇ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.