ಕಾರವಾರ: ಉತ್ತರ ಕನ್ನಡದಲ್ಲಿ ಕೋವಿಡ್ ಹರಡುವಿಕೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಕೊರೊನಾ ನಿಯಮದಲ್ಲಿ ಮತ್ತಷ್ಟು ಸಡಿಲಿಕೆ ಮಾಡಿ, ಮತ್ತು ವಿವಿಧ ದೇವಸ್ಥಾನ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಪೂಜಾ ಕಾರ್ಯದ ಜೊತೆ ಸೇವಾ ಕಾರ್ಯಕ್ಕೆ ಅವಕಾಶ ನೀಡಿ ಹೊಸ ಮಾರ್ಗಸೂಚಿಯನ್ನು ಕಡ್ಡಾಯ ಪಾಲನೆ ಮಾಡಬೇಕೆಂದು ಆದೇಶಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದ್ದರೂ ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಲಾಕ್‍ಡೌನ್ ಸಡಿಲಿಕೆ ಅನ್ವಯವಾಗಿರಲಿಲ್ಲ. ಆದರೆ ಇದೀಗ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇಕಡಾ 1 ಕ್ಕಿಂತ ಕಡಿಮೆಯಿರುವ ಕಾರಣ ಕೋವಿಡ್ ನಿಯಮಗಳಲ್ಲಿ ಸಡಿಲಿಕೆ ನೂತನ ಆದೇಶ ಜಾರಿಗೊಳಿಸಿದ್ದಾರೆ. ಇದರಿಂದ ಜಿಲ್ಲೆಯ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸುವ ಭಕ್ತರಿಗೆ ಸೇವೆಗಳಿಗೆ ಅವಕಾಶ ಸಿಕ್ಕಂತಾಗಿದೆ.
ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಶೇ.1 ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇದೆ, ಜೊತೆಗೆ ಸಾವಿನ ಪ್ರಮಾಣ ಸಹ ಅತ್ಯಂತ ಕಡಿಮೆಯಾಗಿದೆ. ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಹೆಸರುವಾಸಿಯಾಗಿರುವ ಜಿಲ್ಲೆಯಲ್ಲಿ ಪ್ರವಾಸಿಗರ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿದೆ.