ಶಿರಸಿ: ತಾಲೂಕಿನ ಯಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಬರೂರು ಕತ್ರಿಯಲ್ಲಿ ಶಿರಸಿ ನಗರದ ಕಡೆಯಿಂದ ಬರುವ ಪ್ರವಾಸಿಗರು ಮತ್ತು ಇತರರು ವಿಪರೀತವಾಗಿ ಕಸ ಎಸೆಯುವುದನ್ನು ಗಮನಿಸಿದ ಯಡಳ್ಳಿ ಗ್ರಾಮ ಪಂಚಾಯತವು ಮೂರು ವರ್ಷಗಳ ಹಿಂದೆ ಅಲ್ಲಿ ಕಸದ ತೊಟ್ಟಿಯನ್ನು ನಿರ್ಮಿಸಿತ್ತು. ಅದಕ್ಕಿಂತ ಮೊದಲು ಅಲ್ಲಿ ಯಾವುದೇ ಕಸದ ತೊಟ್ಟಿ ಇರಲಿಲ್ಲ. ಆದರೇ ಅಲ್ಲಿ ವಿಪರೀತವಾದ ಕಸ ಬಂದು ಬೀಳತೊಡಗಿದಾಗ ಅದನ್ನು ನಿರ್ವಹಣೆ ಮಾಡುವುದು ಕಷ್ಟವಾಯಿತು. ಯಾಕೆಂದರೆ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವಂತಹ ಯಾವುದೇ ವ್ಯವಸ್ಥೆ ಇರಲಿಲ್ಲ. ಆದಾಗ್ಯೂ ಹಲವಾರು ಬಾರಿ ಶಿರಸಿ ನಗರ ಸಭೆಯವರನ್ನು ಕರೆಯಿಸಿ ಕಸ ವಿಲೇವಾರಿ ಮಾಡಲಾಗಿತ್ತು.
ಈಗ ಯಡಳ್ಳಿ ಗ್ರಾಮ ಪಂಚಾಯತಕ್ಕೆ ಘನ ತ್ಯಾಜ್ಯ ವಿಲೇವಾರಿ ಘಟಕವು ಬಂದಿರುವುದರಿಂದ ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡುವ ಕುರಿತಾಗಿ ಯೋಜನೆ ಸಿದ್ಧವಾಗುತ್ತಿದೆ. ಕಸ ಸಂಗ್ರಹಣೆಗಾಗಿ ವಾಹನ ಹಾಗೂ ಪ್ರತಿ ಮನೆಗೆ ನೀಡುವುದಕ್ಕಾಗಿ ಕಸದ ಬುಟ್ಟಿಗಳನ್ನು ಖರೀದಿಸಿ ವಿತರಣೆ ಮಾಡಲಾಗುತ್ತಿದೆ. ಹಾಗೂ ಅ. 2 ರೊಳಗಾಗಿ ಇಡೀ ಯಡಳ್ಳಿ ಪಂಚಾಯತವನ್ನು ಘನ ತ್ಯಾಜ್ಯ ವಿಲೇವಾರಿ ಘಟಕದಡಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಸೇರಿಸಿಕೊಳ್ಳಲಾಗುವುದು. ಹೀಗಾಗಿ ಯಾವುದೇ ಮನೆಯಿಂದ ಹೊರಗಡೆ ಕಸ ಎಸೆಯುವ ಪ್ರಮೇಯ ಬರುವುದಿಲಾ.್ಲ ಆದ್ದರಿಂದ ಪಂಚಾಯತಿಯ ವ್ಯಾಪ್ತಿಯಲ್ಲಿರುವ ಎಲ್ಲಾ ಸಾರ್ವಜನಿಕ ಕಸದ ತೊಟ್ಟಿಗಳನ್ನು ತೆರವುಗೊಳಿಸಲಾಗುವುದು. ಮೊದಲ ಹಂತವಾಗಿ ಬರೂರು ಕತ್ರಿಯಲ್ಲಿರುವ ಕಸದ ತೊಟ್ಟಿಯನ್ನು ತೆರವು ಗೊಳಿಸುವ ಬಗ್ಗೆ ಈಗಾಗಲೇ ಸಮಿತಿಯು ನಿರ್ಧರಿಸಿತ್ತು. ಆದರೆ ನಂತರ ಲಾಕ್ ಡೌನನಿಂದಾಗಿ ಸ್ಥಳೀಯ ಕೆಲಸಗಾರರು ಒಪ್ಪದೆ ಇದ್ದ ಕಾರಣ ಕೆಲಸ ಮುಂದೂಡಲಾಗಿತ್ತು. ಈ ಬಾರಿ ಜೀವ ಜಲ ಕಾರ್ಯಪಡೆಯವರು ಆ ಕಸದ ತೊಟ್ಟಿಯನ್ನು ಸ್ವಚ್ಛಗೊಳಿಸಿರುತ್ತಾರೆ. ಆದ್ದರಿಂದ ನಾವು ತಿಳಿಸಿದ ಕೆಲಸಗಾರರು ಬಂದು ಕಸದ ತೊಟ್ಟಿಯನ್ನು ತೆರವುಗೊಳಿಸಿದ್ದಾರೆ. ಇನ್ನು ಮುಂದೆ ಸಾರ್ವಜನಿಕವಾಗಿ ಯಾವುದೇ ಕಸವನ್ನು ಎಸೆಯುವಂತಿಲ್ಲ ಎಂಬ ನಾಮಫಲಕವನ್ನು ಅಲ್ಲಿ ಅಳವಡಿಸಲಾಗುವುದು.
ಸಾರ್ವಜನಿಕವಾಗಿ ಕಸ ಎಸೆಯುವುದು ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ ರಾಜ್ ಅಧಿನಿಯಮ 1993 ಪ್ರಕರಣ 315 ರ ಉಪವಿಧಿ ಅನ್ವಯ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆ ರೀತಿ ಕಸ ಎಸೆದಲ್ಲಿ ಸಾರ್ವಜನಿಕರಿಗೆ ರೂ. 500.00 ರಿಂದ 2000.00 ವರೆಗೆ ದಂಡವನ್ನು ವಿಧಿಸಬಹುದಾಗಿದೆ. ಆದ್ದರಿಂದ ಸೂಕ್ತ ವೈಜ್ಞಾನಿಕ ಕಸ ನಿರ್ವಹಣೆಗಾಗಿ ಪಂಚಾಯತವು ಸೂಕ್ತ ಕ್ರಮಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತಿದೆ. ಹೊರತಾಗಿ ಇದು ಯಾವುದೇ ರೀತಿಯ ರಾಜಕೀಯ ಪ್ರೇರಿತವಾಗಿದ್ದಲ್ಲ. ಈ ವಿಷಯವಾಗಿ ಅನೇಕ ಸಾಮಾಜಿಕ ಜಾಲ ತಾಣ ಹಾಗೂ ಪತ್ರಿಕೆಗಳಲ್ಲಿ ಚರ್ಚೆ ನಡೆಯುತ್ತಿರುವುದರಿಂದ ಗ್ರಾಮ ಪಂಚಾಯತವು ಈ ಸ್ಪಷ್ಠೀಕರಣ ನೀಡುತ್ತಿದೆ. ಈ ಹಿಂದೆ ಪಂಚಾಯತದ ಸದಸ್ಯರು, ಸಾರ್ವಜನಿಕರು ಮತ್ತು ಪಂಚಾಯತ ಸಿಬ್ಬಂದಿಗಳು ಸ್ವಚ್ಛತಾ ಆಂದೋಲವನ್ನು ಎಲ್ಲಾ ವಾರ್ಡಗಳಲ್ಲಿ ಮಾಡಿದ್ದರು. ಈ ಒಂದು ಸ್ವಚ್ಛತಾ ಆಂದೋಲನಕ್ಕೆ ಕೈ ಜೋಡಿಸಿದ ಜೀವ ಜಲ ಕಾರ್ಯಪಡೆ ಶಿರಸಿರವರಿಗೆ ಗ್ರಾಮ ಪಂಚಾಯತವು ಹೃತ್ಪೂರ್ವಕವಾಗಿ ಅಭಿನಂದನೆಯನ್ನು ಸಲ್ಲಿಸಿದೆ.