ಅಂಕೋಲಾ: ‘ಕಾಡಿನ ವಿಶ್ವಕೋಶ’ (Encyclopedia of the Forest) ಎಂದೇ ರಾಜ್ಯಾದ್ಯಂತ ಪ್ರಸಿದ್ಧಿಯಾಗಿರುವ ತುಳಸಿ ಗೌಡರಿಗೆ ಈ ಸಾಲಿನ ಪದ್ಮಶ್ರೀ ಪ್ರಶಸ್ತಿ (ಸೋಶಿಯಲ್ ವರ್ಕ್, ಪರಿಸರ ವಿಭಾಗ) ದೊರೆತಿದೆ. ಕಾಡು ಸಸ್ಯ ಹಾಗು ಗಿಡಮೂಲಿಕೆಯ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಜಿಲ್ಲೆಯ ಹಾಲಕ್ಕಿ ಸಮುದಾಯದ ಮಹಿಳೆಯೋರ್ವಳಿಗೆ ದೊರೆತ ಗೌರವ ಇದಾಗಿದೆ.
72 ವರ್ಷದ ತುಳಸಿ ಗೌಡ ಇವರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿಯ ಹಾಲಕ್ಕಿ ಗೌಡ ಸಮುದಾಯದವರಾಗಿದ್ದಾರೆ. ಕಳೆದ 60 ವರ್ಷಗಳಿಂದ ಲಕ್ಷಾಂತರ ಮರಗಳನ್ನು ನೆಟ್ಟು ಬೆಳೆಸಿದ ಕೀರ್ತಿ ಇವರದ್ದು. ಜೊತೆಗೆ ಗಿಡಮೂಲಿಕೆ ಸಸ್ಯಗಳ ಬಗ್ಗೆ ಅಪಾರ ಮಾಹಿತಿ ಇವರ ಬಳಿಯಿದ್ದು, ಮುಂದಿನ ಜನಾಂಗಕ್ಕೆ ಅದನ್ನು ತಿಳೊಸಿಕೊಡುವ ಕಾರ್ಯವನ್ನೂ ಸಹ ಅವರು ಮಾಡುತ್ತಿದ್ದಾರೆ.
ಸ್ವಇಚ್ಛೆಯಿಂದ ಅರಣ್ಯ ಇಲಾಖೆಯ ಜೊತೆಗೂಡಿ, ಕಾಡಿನ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಇವರ ಸಾಮಾಜಿಕ ಕಾಳಜಿ, ಕಳಕಳಿ ಕಂಡು ಅಧಿಕಾರಿಗಳೆ ಇವರಿಗೆ ಅರಣ್ಯ ಇಲಾಖಾ ಖಾಯಂ ಸದಸ್ಯರಾಗಿ ಸೇರ್ಪಡೆ ಗೊಳಿಸಿಗೊಂಡಿದ್ದಾರೆ.
ಶಿಕ್ಷಣದಲ್ಲಿ ಅನಕ್ಷರಸ್ಥರಾಗಿದ್ದರೂ, ಗಿಡಮೂಲಿಕೆ, ಕಾಡು ಸಸ್ಯಗಳ ಬಗ್ಗೆ ಇವರಿಗಿರುವ ಜ್ಞಾನ ಭಂಡಾರ ಅಗಾಧವಾದುದು. ಹಿಂದುಳಿದ ಜನಾಂಗದಿಂದ ಬಂದಿದ್ದರೂ, ಸಾಮಾಜಿಕ ಸೇವೆಯಲ್ಲಿ ತಮನ್ನು ಕಳೆದ ಅರ್ಧ ಶತಮಾನಕ್ಕಿಂತಲೂ ಅಧಿಕ ಸಮಯದಿಂದ ತೊಡಗಿಸಿಕೊಂಡಿರುವ ಹೆಮ್ಮೆ ಇವರದ್ದು.