ಹಳಿಯಾಳ: ರಾಜ್ಯದಲ್ಲಿ ಸ್ಥಗಿತವಾದ ‘ಆರೋಗ್ಯ ಬಂಧು’ ಯೋಜನೆಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿರುವುದು ಸ್ವಾಗತಾರ್ಹ ಎಂದು ಮಾಜಿ ಸಚಿವ, ಶಾಸಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ವೈದ್ಯರ ಕೊರತೆ ನೀಗಿಸುವ ಹಾಗೂ ಉತ್ತಮ ಆರೋಗ್ಯ ಸೇವೆ ಯನ್ನು ನೀಡುವ ದೃಷ್ಟಿಯಿಂದ ರಚಿತವಾದ “ಆರೋಗ್ಯ ಬಂಧು” ಯೋಜನೆಯನ್ನು ರಾಜ್ಯ ಸರ್ಕಾರ ಕಳೆದ ಜುಲೈ ತಿಂಗಳಿನಲ್ಲಿ ಒಪ್ಪಂದದ ಅವಧಿ ಅಂತ್ಯವಾದ ಹಿನ್ನಲೆಯಲ್ಲಿ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ವೈದ್ಯರ ಕೊರತೆ ಇರುವ ಅನೇಕ ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮರ್ಪಕ ಆರೋಗ್ಯ ಸೇವೆ ಇಲ್ಲದೇ ಜನರು ಸಂಕಷ್ಟಕ್ಕಿಡಾಗಿದ್ದರು. ಇದರಿಂದ ನನ್ನ ಮತ ಕ್ಷೇತ್ರ ವ್ಯಾಪ್ತಿಯ ಜೊಯಿಡಾ ತಾಲೂಕಿನ ಕ್ಯಾಸರ್ ಲಾಕ್ ಮತ್ತು ಡಿಗ್ಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಸಮಸ್ಯೆ ತಲೆದೋರಿತ್ತು. ಈ ಬಗ್ಗೆ ಆರ್ವಿಡಿ ಆರೋಗ್ಯ ಸಚಿವರಿಗೆ ಆರೋಗ್ಯ ಬಂಧು ಸೇವೆಯನ್ನು ಮುಂದುವರಿಸಲು ಮನವಿ ಸಲ್ಲಿಸಿದ್ದರು.
ಇದರಿಂದ ನಮ್ಮ ಜಿಲ್ಲೆಯಲ್ಲಿ ಸದ್ಯ ಅರೋಗ್ಯ ಸೇವೆ ಒದಗಿಸುತ್ತಿರುವ ಸ್ಕೋಡವೇಸ ಸಂಸ್ಥೆಯ ಕಾರ್ಯವು ಮುಂದುವರಿಯಲಿದೆ. ಈ ಬಗ್ಗೆ ಆರೋಗ್ಯ ಸಚಿವರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮುಖ್ಯಕಾರ್ಯ ನಿರ್ವಹಣಾ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.