ಬೆಂಗಳೂರು: ಮೈಸೂರಿನ ದೇವಸ್ಥಾನ ನೆಲಸಮದಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಕಾನೂನಾತ್ಮಕ, ಆಡಳಿತಾತ್ಮಕ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಂಜನಗೂಡು ದೇವಾಲಯ ನೆಲಸಮ ವಿಚಾರ ಎಲ್ಲರ ಮನಸ್ಸಿಗೂ ಗಾಯ ಮಾಡಿದೆ. ನಮ್ಮ ಗಮನಕ್ಕೆ ತಾರದೆ ಅಧಿಕಾರಿಗಳಿಂದ ನಡೆದ ಕೆಲಸ ಇದಾಗಿದೆ. ಈ ಸಂಬಂಧ ನಿರಂತರ ಚರ್ಚೆ ನಡೆಸಲಾಗಿದ್ದು, ಇಂತಹ ಘಟನೆಗಳು ಮತ್ತೆ ನಡೆಯದಂತೆ ಮಾಡುವ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ನಂಜನಗೂಡಿನ ಭಕ್ತರ ಮನಸ್ಸಿಗೆ ನೋವಾಗಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಆಡಳಿತಾತ್ಮಕ, ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ಹಿರಿಯರ ಜೊತೆಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವುದಾಗಿಯೂ ಅವರು ತಿಳಿಸಿದ್ದಾರೆ.