ಕುಮಟಾ: ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಉಪಯುಕ್ತವಾದ ಡಯಾಲಿಸಸ್ ಯಂತ್ರವನ್ನು ಹುಬ್ಬಳ್ಳಿಯ ಡಿ.ಆರ್.ಎನ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿ ಕೊಡುಗೆಯಾಗಿ ನೀಡುವ ಮೂಲಕ ಮತ್ತೊಮ್ಮೆ ತನ್ನ ಸಾಮಾಜಿಕ ಕಳಕಳಿ ಮೆರೆದಿದೆ.
ತಾಲೂಕಿನ ಸರ್ಕಾರಿ ಆಸ್ಪತ್ರೆಯ ಡಯಾಲಿಸಸ್ ಘಟಕಕ್ಕೆ ಅಗತ್ಯವಾದ ಡಯಾಲಿಸಸ್ ಮಶೀನನ್ನು ಪೂರೈಸುವಂತೆ ಕುಮಟಾ ರೋಟರಿ ಕ್ಲಬ್, ಹುಬ್ಬಳ್ಳಿಯ ಡಿ.ಆರ್.ಎನ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿಯ ಮುಖ್ಯಸ್ಥ ದಿನೇಶ ನಾಯಕ ಅವರನ್ನು ವಿನಂತಿಸಿಕೊಂಡಿತ್ತು. ಅಂತೆಯೇ, ರೋಟರಿ ಕ್ಲಬ್ ಮನವಿಗೆ ಶೀಘ್ರವೇ ಸ್ಪಂದಿಸಿದ ಕಂಪನಿಯ ಮುಖ್ಯಸ್ಥರು ಡಯಾಲೀಸಸ್ ಯಂತ್ರವನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ್ದಾರೆ. ಶನಿವಾರ ಕಂಪನಿಯ ಆಡಳಿತಾಧಿಕಾರಿ ಚೇತನ ಕಾಮತ್ ಅವರು ಡಯಾಲೀಸಸ್ ಯಂತ್ರವನ್ನು ಕುಮಟಾ ಉಪವಿಭಾಗಾಧಿಕಾರಿ ರಾಹುಲ ರತ್ನಂ ಪಾಂಡೆ ಅವರ ಮುಖಾಂತರ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಣೇಶ ನಾಯ್ಕ ಅವರಿಗೆ ಹಸ್ತಾಂತರಿಸಿದ್ದಾರೆ.
ಈ ವೇಳೆ ಉಪವಿಭಾಗಾಧಿಕಾರಿ ರಾಹುಲ ರತ್ಮಂ ಪಾಂಡೆ ಮಾತನಾಡಿ, ಇಲ್ಲಿನ ರೋಟರಿ ಕ್ಲಬ್ ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಇತರೆ ಸಂಸ್ಥೆಗಳಿಗೆ ಮಾದರಿಯಾಗಿದೆ. ಸರ್ಕಾರಿ ಆಸ್ಪತ್ರೆಗೂ ಅನೇಕ ವೈದ್ಯಕೀಯ ಉಪಕರಣಗಳನ್ನು ಕೊಡಿಗೆಯಾಗಿ ನೀಡಿರುವುದು ನಿಜ್ಕಕೂ ಶ್ಲಾಘನೀಯ. ಅಲ್ಲದೇ, ಆಸ್ಪತ್ರೆಗೆ ಅಂಬುಲೆನ್ಸ್, ಡಯಾಲಿಸಸ್ ಮಶೀನ್ ನೀಡುವ ಮೂಲಕ ಹುಬ್ಬಳ್ಳಿಯ ಡಿ.ಆರ್.ಎನ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿಯು ಉತ್ತಮ ಕಾರ್ಯ ಮಾಡಿದೆ ಎಂದು ಪ್ರಶಂಸಿಸಿದರು.
ಹುಬ್ಬಳ್ಳಿಯ ಡಿ.ಆರ್.ಎನ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿಯ ಆಡಳಿತಾಧಿಕಾರಿ ಚೇತನ ಕಾಮತ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಡಯಾಲೀಸಸ್ ಮಶೀನ್ ನೀಡುವಂತೆ ರೋಟರಿ ಕ್ಲಬ್ ಜೊತೆಗೆ ಶಾಸಕ ದಿನಕರ ಶೆಟ್ಟಿ, ಡಾ. ಗಣೇಶ ನಾಯ್ಕ ಅವರು ಮನವಿ ಮಾಡಿದ್ದರು. ಹಾಗಾಗಿ ಡಯಾಲೀಸಸ್ ಯಂತ್ರವನ್ನು ಕಂಪನಿಯಿಂದ ಕೊಡುಗೆ ನೀಡಿದ್ದೇವೆ. ಮೂರು ತಿಂಗಳ ಹಿಂದೆಯೂ ಈ ಆಸ್ಪತ್ರೆಗೆ ಸುಸಜ್ಜಿತ ಅಂಬುಲೆನ್ಸ್ ನೀಡಿದ್ದೇವೆ. ಇವೆಲ್ಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಕೊಂಡು ಹೋಗುವುದು ಆಸ್ಪತ್ರೆ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಈ ಭಾಗದ ಜನರ ಅನುಕೂಲಕ್ಕಾಗಿ ನಮ್ಮ ಕೈಲಾದ ನೆರವನ್ನು ಕಂಪನಿಯಿಂದ ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕುಮಟಾ ರೋಟರಿ ಕ್ಲಬ್ ಅಧ್ಯಕ್ಷೆ ನಮೃತಾ ಶಾನಭಾಗ, ಆಸ್ಪತ್ರೆ ವೈದ್ಯಾಧಿಕಾರಿ ಡಾ ಗಣೇಶ ನಾಯ್ಕ, ಪ್ರಮುಖರಾದ ಸತೀಶ ನಾಯ್ಕ, ಸುರೇಶ ಭಟ್ ಸೇರಿದಂತೆ ಇತರರು ಇದ್ದರು.