ಕುಮಟಾ: ತಾಲೂಕಿಗೆ ರಾಜ್ಯ ಸರಕಾರದಿಂದ ನೀಡಲಾದ ನೂತನ ಹೈಟೆಕ್ 108 ತುರ್ತು ಆಂಬ್ಯುಲೆನ್ಸ್ ಸೇವೆಗೆ ತಾಲೂಕಾ ಆಸ್ಪತ್ರೆಯ ಆವರಣದಲ್ಲಿ ಶಾಸಕ ದಿನಕರ ಶೆಟ್ಟಿ ಶನಿವಾರ ಚಾಲನೆ ನೀಡಿದರು.
ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಇದೊಂದು ಹೈಟೆಕ್ ಮಾದರಿಯ ಅಂಬುಲೆನ್ಸ್ ಸೇವೆ ಆಗಿದ್ದು, ಇದನ್ನು ಐಸಿಯುನ ಮಾದರಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಇದರಲ್ಲಿ ಇ.ಸಿ.ಜಿ, ಡಾಪ್ಲರ್, ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಸಕಲ ತುರ್ತು ಸೌಲಭ್ಯವನ್ನು ನೀಡಲಾಗಿದ್ದು, ಇಬ್ಬರು ಚಾಲಕರು ಮೂವರು ನರ್ಸ್ಗಳು ಇದರಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ತುರ್ತು ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಯಾಗಿ ಮಣಿಪಾಲ್‌ನಂತಹ ದೊಡ್ಡ ಆಸ್ಪತ್ರೆಗೆ ತೆರಳಲು ಬೇಕಾದ ಎಲ್ಲಾ ಸೌಲಭ್ಯಗಳನ್ನು ಈ ನೂತನ ಆಂಬ್ಯುಲೆನ್ಸ್ ಹೊಂದಿದೆ. ಸರಕಾರದಿಂದ ರಾಜ್ಯಕ್ಕೆ ನೀಡಲಾದ ಸುಮಾರು 110 ಅಂಬುಲೆನ್ಸ್ ಬೆಂಗಳೂರಿನಲ್ಲಿ ಮಾತ್ರ ಬಿಡುಗಡೆಯಾಗಿದ್ದು, ನಂತರ ಕುಮಟಾದಲ್ಲಿಯೇ ಚಾಲನೆ ದೊರೆತಿವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಲ್ಲದೇ, ಸಂಬಂಧಪಟ್ಟವರು ಇದರ ಉತ್ತಮ ನಿರ್ವಹಣೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ವಿಶೇಷ ಆಹ್ವಾನಿತ ಹಾಗೂ ಸಿದ್ದಾಪುರ ಮಂಡಲದ ಪ್ರಭಾರಿ ಎಂ.ಜಿ.ಭಟ್, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ್, ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ಧೀರೂ ಶಾನಭಾಗ, ಎಮ್.ಎಮ್.ಹೆಗಡೆ ಕಡ್ಲೆ, ತಾಲೂಕಾ ವೈದ್ಯಾಧಿಕಾರಿ ಆಜ್ಞಾ ನಾಯಕ, ಆಸ್ಪತ್ರೆ ಅಡಳಿತಾಧಿಕಾರಿ ಗಣೇಶ ನಾಯ್ಕ ಹಾಗೂ ಅಂಬುಲೆನ್ಸ್ ಸಿಬ್ಬಂದಿಗಳು ಸೇರಿದಂತೆ ಇತರರು ಇದ್ದರು.