ಹಳಿಯಾಳ: ಈ ವರ್ಷದ ಜುಲೈ ತಿಂಗಳಲ್ಲಿ ಸುರಿದ ಘನಘೋರ ಮಳೆಯಿಂದ ಯಲ್ಲಾಪುರ ತಾಲುಕಿನ ಹಲವೆಡೆ ತುಂಬಾ ಅನಾಹುತಗಳಾಗಿದ್ದು, ಸಂತ್ರಸ್ತರಿಗೆ ಸೂಕ್ತ ಪರಿಹಾರ, ವಿಶೇಷ ಪ್ಯಾಕೇಜ್’ನ್ನು ಸರ್ಕಾರ ಒದಗಿಸಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಚಿವ, ಶಾಸಕ ಆರ್ ವಿ ದೇಶಪಾಂಡೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಜುಲೈನಲ್ಲಿ ಸುರಿದ ಮಳೆಯಿಂದ ಉಂಟಾದ ಪ್ರಕೃತಿ ವಿಕೋಪದ ನಂತರದ ಪರಿಸ್ಥಿತಿ ಗಮನಿಸಿದಾಗ ಯಲ್ಲಾಪುರ ತಾಲೂಕಿನ ಕಳಚೆ ಮತ್ತು ಸುತ್ತಲಿನ ಹಳ್ಳಿಗಳ ಪ್ರದೇಶ ಸಂಪೂರ್ಣ ನಾಶವಾಗಿದ್ದು, ಪರಿಹಾರ ಕಲ್ಪಿಸುವ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವಾಗ ವಿಶೇಷವಾಗಿ ಪ್ಯಾಕೇಜ್ ಒಂದನ್ನು ರೂಪಿಸಿ. ಈ ಕುರಿತು ಪೂಜ್ಯರಾದ ಶ್ರೀ ಸ್ವರ್ಣವಲ್ಲಿ ಗುರುಗಳು ರಾಷ್ಟ್ರೀಯ ವಿಕೋಪವೆಂದು ಪರಿಗಣಿಸಿ ಪರಿಹಾರ ಕಲ್ಪಿಸುವಂತೆ ಸರಕಾರಕ್ಕೆ ಆಗ್ರಹಿಸಿ ಬರೆದ ವಿಷಯವನ್ನು ಕೂಡ ಈ ಸಂದರ್ಭದಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸತೀಶ್ ನಾಯ್ಕ್ ತಿಳಿಸಿದ್ದಾರೆ.