ಭಟ್ಕಳ: ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಹುಯಿಲಮಡಿ ಸಮುದ್ರ ಕಿನಾರೆಯ ಪಕ್ಕದ ಬಂಡೆಗಳ ನಡುವೆ ಪುರುಷ ಹಾಗೂ ಮಹಿಳೆಯ ಶವ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಅವರು ಹೊಂದಿದ್ದ ದಾಖಲೆಗಳಿಂದ ಮೃತರು ಬೆಂಗಳೂರಿನ ಜೆ.ಪಿ. ನಗರದ ನಿವಾಸಿಗಳು ಆದಿತ್ಯ ಬಿ ಎಸ್, ಹಾಗೂ ಲಕ್ಷ್ಮಿ ಬಿ ಎಂದು ತಿಳಿದು ಬಂದಿದೆ. ಬೆಂಗಳೂರಿನಿಂದ ಬಂದಿದ್ದ ಇವರು ಹುಯಿಲುಮಡಿಗೆ ಹೋಗಿ 2-3 ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಲಕ್ಷ್ಮೀ ಶವ ಸಮುದ್ರದಂಚಿನಲ್ಲಿಯ ಬಂಡೆಯಿಂದ ಕೆಳಕ್ಕೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿದ್ದರೆ, ಆತನ ಶವ ಕುತ್ತಿಗೆಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿದೆ. ಆಕೆಯನ್ನು ಮೊದಲು ಕೊಲೆ ಮಾಡಿ ಆತನು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಸಂಶಯವೂ ಇದೆ, ಅವರ ಬಳಿ ಇದ್ದ ಡ್ರೈವಿಂಗ್ ಲೈಸೆನ್ಸ್, ಆಧಾರ ಕಾರ್ಡ್ ಇತ್ಯಾದಿ ದಾಖಲೆಗಳು ಹರಿದುಹೋಗಿವೆ.
ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಅಲ್ಲಿಗೆ ಬಂದಿದ್ದರೋ, ಮಹಿಳೆಯನ್ನು ಕರೆದುಕೊಂಡು ಬಂದು ಕೊಲೆ ಮಾಡಿ ನಂತರ ವ್ಯಕ್ತಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.