ಅಂಕೋಲಾ: ಕಾಡು ಪ್ರಾಣಿಗಳಿಂದ ಬೆಳೆಗಳ ರಕ್ಷಣೆಗೆ ವಿಶೇಷ ಕ್ರಮವಹಿಸುವುದು, ಬೆಳೆಹಾನಿಗೆ ಸರಿಯಾದ ಪರಿಹಾರ ಹಾಗೂ ನವೀಕರಣದ ಹೆಸರಲ್ಲಿ ರೈತರ ಬಂದೂಕನ್ನು ಪದೇ ಪದೇ ಠೇವಣಿ ಇಡುವ ಕ್ರಮವನ್ನು ಕೈ ಬಿಡಬೇಕು ಎಂಬಿತ್ಯಾದಿ ರೈತರ ಕಷ್ಟಗಳಿಗೆ ಪರಿಹಾರಕ್ಕೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಯಲ್ಲಾಪುರ ಘಟಕದ ವತಿಯಿಂದ ಕೇಂದ್ರ ಸರಕಾರದ ರೈತ ಕಲ್ಯಾಣ ಮಂತ್ರಾಲಯ ಮತ್ತು ರಾಜ್ಯ ಕೃಷಿ ಸಚಿವೆ ಶೋಭಾ ಕರಾಂದ್ಲಾಜೆಯವರಿಗೆ ಮನವಿ ಸಲ್ಲಿಸಿದರು.
ಸೆ.18 ರಂದು ತಾಲೂಕಿನ ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಕೃಗಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕೃಷಿಕರ ಕಷ್ಟಗಳ ಕುರಿತು ಮನವಿ ನೀಡಿದರು. ಮಂಗಗಳ ಹಾವಳಿ ಅತಿಯಾಗಿದ್ದು ರೈತರ ಎಲ್ಲಾ ಫಸಲು ಗಳಿಗೆ ಹಾನಿಮಾಡುತ್ತಿದ್ದು ಅದನ್ನು ತಪ್ಪಿಸಲು ಮಂಗನ ಪಾರ್ಕ್ ಮಾಡಬೇಕು ಮೊದಲಾದ ಸಂಗತಿಗಳ ಬಗ್ಗೆ ಕೂಡಲೆ ಕ್ರಮ ಕೈಗೊಂಡು ರೈತರು ಸಂಕಷ್ಟದಿಂದ ಪಾರಾಗುವಂತಾಗಬೇಕು ಎಂದು ಆಗ್ರಹಿಸಿದರು.
ಅನ್ನದಂಗಳದಲ್ಲಿ ಮಾತು ಕತೆ ಕಾರ್ಯಕ್ರಮಕ್ಕೆ ಕೈಗಡಿಗೆ ಆಗಮಿಸಿದ ಸಂದರ್ಭದಲ್ಲಿ ಮನವಿ ನೀಡಲಾಯಿತು. ಭಾ.ಕಿ.ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ ಕಾರ್ಯದರ್ಶಿ ಗೋಪಾಲಕೃಷ್ಣ ರಾ ಬಾಳೆಗದ್ದೆ ಸಚಿವೆಗೆ ಮನವಿ ನೀಡಿ ರೈತರ ಸಂಕಷ್ಟದ ಬಗ್ಗೆ ಮನವರಿಕೆ ಮಾಡಿಕೊಟ್ಟರು.