ಶಿರಸಿ: ಧಾರವಾಡ, ಹಾವೇರಿ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ನೌಕರರ ಕಲ್ಯಾಣ ಸಂಘ ನಿ., ಧಾರವಾಡ ಇದರ ಆಡಳಿತ ಮಂಡಳಿಯ ಸಭೆಯಲ್ಲಿ ಧಾರವಾಡ ಹಾಲು ಒಕ್ಕೂಟ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ನಿರ್ದೇಶಕ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘವು ಒಕ್ಕೂಟದ ಒಂದು ವಿಭಾಗವಾಗಿದ್ದು, ಹಾಲು ಉತ್ಪಾದಕರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರನ್ನು ಮತ್ತು ಸಂಘದ ಶೇರು ಸದಸ್ಯತ್ವ ಪಡೆದ ರೈತರನ್ನು ತನ್ನ ಆ ಜೀವ ಸದಸ್ಯರನ್ನಾಗಿ ಮಾಡಿಕೊಂಡು ಹಾಗೂ ಒಕ್ಕೂಟದ ನೌಕರರನ್ನು ಒಳಗೊಂಡು ಕಳೆದ 12 ವರ್ಷಗಳಿಂದ ಹಾಲು ಸಂಘದ ಕಾರ್ಯದರ್ಶಿಗಳಿಗೆ, ಹಾಲು ಉತ್ಪಾದಕ ರೈತರಿಗೆ ಹಾಗೂ ಒಕ್ಕೂಟದ ನೌಕರರಿಗೆ ಸಹಾಯ ಒದಗಿಸುತ್ತಾ ಕಾರ್ಯನಿರ್ಹಿಸುತ್ತಾ ಬಂದಿದೆ. ಕಲ್ಯಾಣ ಸಂಘದ ಬೈಲಾತಿದ್ದುಪಡಿಯಾದ ಕಾರಣ ನೂತನ ಆಡಳಿತ ಮಂಡಳಿಯ ರಚನೆಯಾಗಿರುವುದರಿಂದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಅವಿರೋಧವಾಗಿ ಸುರೇಶ್ಚಂದ್ರ ಹೆಗಡೆ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಮಾತನಾಡಿದ ಅವರು ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ವತಿಯಿಂದ ನೀಡಲ್ಪಡುವ ಸೌಲಭ್ಯಗಳನ್ನು ಎಲ್ಲ ಹಾಲು ಉತ್ಪಾದಕರುಪಡೆಯುವಂತಾಗಬೇಕು. ಆದ್ದರಿಂದ ಪ್ರತೀಯೊಬ್ಬ ಹಾಲು ಉತ್ಪಾದಕನೂ ಸಹ ಕಲ್ಯಾಣ ಸಂಘಕ್ಕೆ ತಪ್ಪದೇ ಸದಸ್ಯರಾಗುವಂತೆ ಅವರು ಮನವಿ ಮಾಡಿಕೊಂಡರು. ಕೇವಲ ರೂ. 100/-ಗಳನ್ನು ಪಾವತಿಸಿ ಆ ಜೀವ ಸದಸ್ಯರಾಗುವ ಮೂಲಕ ಒಕ್ಕೂಟದಿಂದ ಹಾಗೂ ಕಲ್ಯಾಣ ಸಂಘದಿಂದ ನೀಡಲಾಗಾಗುವ ಸೌಲಭ್ಯಗಳನ್ನು ಹಾಲು ಉತ್ಪಾದಕ ರೈತಪಡೆಯಬಹುದಾಗಿದೆ ಎಂದರು. ಮುಂಬರುವ ದಿನಗಳಲ್ಲಿ ಕಲ್ಯಾಣ ಸಂಘದಿಂದ ಅನೇಕ ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅವುಗಳನ್ನು ಅತೀ ಶೀಘ್ರವಾಗಿ ಕಾರ್ಯರೂಪಕ್ಕೆ ತಂದು ಒಕ್ಕೂಟದ ಎಲ್ಲ ಹಾಲು ಉತ್ಪಾದಕರಿಗೆ ಅನುಕೂಲವಾಗುವಂತೆ ಮಾಡುವುದು ನನ್ನ ಮುಖ್ಯ ಗುರಿಯಾಗಿದೆ ಎಂದರು.
ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರಪ್ಪ ವೀರಪ್ಪ ಮೊಗದ ಅವರು ಸುರೇಶ್ಚಂದ್ರ ಹೆಗಡೆಯವರಿಗೆ ಶಾಲು ಹೊದಿಸಿ ಅಭಿನಂದನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಸುರೇಶ್ಚಂದ್ರ ಅವರ ನೇತ್ರತ್ವದಲ್ಲಿ ಕಲ್ಯಾಣ ಸಂಘ ಇನ್ನೂ ಉತ್ತಮ ರೀತಿಯಲ್ಲಿ ರೈತರ ಏಳಿಗೆಯ ದಿಶೆಯಲ್ಲಿ ಕಾರ್ಯನಿರ್ಹಿಸುವಂತಾಗಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಧಾರವಾಡ ಹಾಲು ಒಕ್ಕೂಟದ ಎಲ್ಲಾ ನಿರ್ದೇಶಕರುಗಳು ಉಪಸ್ಥಿತರಿದ್ದರು.