EUK ವಿಶೇಷ ವರದಿ: ಕೊವಿಡ್- 19 ಸೊಂಕಿನ ಸುರಕ್ಷತೆಯ ದೃಷ್ಟಿಯಿಂದ ಲಾಕ್ ಡೌನ್ ವಿಧಿಸಿ 13 ದಿನಗಳು ಕಳೆದಿವೆ. ಅವಶ್ಯಕ ವಸ್ತುಗಳಿಗಾಗಿ ಹಳ್ಳಿಗಳಿಂದ ಪಟ್ಟಣಕ್ಕೆ ಬರುತ್ತಿದ್ದವರು ಈಗ ಮನೆಯಲ್ಲಿಯೇ ಕುಳಿತುಕೊಂಡಿದ್ದಾರೆ. ಅಂತವರಿಗೆ ದಿನಾವಶ್ಯಕ ಅತ್ಯಗತ್ಯ ವಸ್ತುಗಳು ಮನೆ ಬಾಗಿಲಿಗೆ ತಲುಪಬೇಕಂಬ ಸದುದ್ದೇಶದಿಂದ ಜಿಲ್ಲಾಡಳಿತ ಹಾಗು ತಾಲೂಕಾಡಳಿತ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಪಂಚಾಯತ ವ್ಯಾಪ್ತಿಯಲ್ಲಿನ ಪ್ರತಿ ಹಳ್ಳಿಗೆ ಹಣ್ಣು-ತರಕಾರಿ ಮಾರಾಟ ಮಾಡಲು ವ್ಯಾಪಾರಸ್ಥರಿಗೆ ಅನುವು ಮಾಡಿಕೊಟ್ಟಿದ್ದು, ಆ ಮೂಲಕ ಜನರಿಗೆ ಅತ್ಯಾವಶ್ಯಕ ವಸ್ತುಗಳು ದೊರೆಯುತ್ತಿವೆ. ವ್ಯಾಪಾರಸ್ಥರು ಪಂಚಾಯತದ ಅಡಿಯಲ್ಲಿ ಅಭಿವೃದ್ಧಿ ಅಧಿಕಾರಿ ಬಳಿಯಿಂದ ಪಾಸ್ ತೆಗೆದುಕೊಂಡು, ಆಯಾ ಪಂಚಾಯತದ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಗುಣಮಟ್ಟದ ಹಣ್ಣು-ತರಕಾರಿಗಳನ್ನು ಮಾರಾಟ ಮಾಡಬೇಕು. ಇದು ಎಲ್ಲ ದೃಷ್ಟಿಯಿಂದಲೂ ಎಲ್ಲರಿಗೂ ಅನುಕೂಲಕರವಾಗಿದೆ.
ಪಾಸ್ ವ್ಯಾಪ್ತಿಯಿಂದ ಹೊರಕ್ಕೆ ಬಂದು ವ್ಯಾಪಾರ; ಜನರಿಂದ ಛೀಮಾರಿ:
ಆದರೆ ಇಂತಹ ಸಮಯವನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲವರು ಕಳಪೆ ಗುಣಮಟ್ಟದ ಹಣ್ಣು-ತರಕಾರಿಗಳನ್ನು ಗಾಡಿಗಳಲ್ಲಿ ತುಂಬಿಕೊಂಡು ಹಳ್ಳಿಗಳಿಗೆ ತೆರಳಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ನಂಬಲರ್ಹ ಮೂಲದಿಂದ ದೊರೆತಿದೆ. ಮತ್ತು ಅಂತವರ ಬಳಿ ಯಾವುದೇ ಅಧಿಕೃತ ಪಾಸ್ ಇರುವುದಿಲ್ಲ ಮತ್ತು ಇನ್ನೂ ಹಲವೆಡೆ ದುರಾಸೆಯಿಂದ ತನ್ನ ವ್ಯಾಪ್ತಿಗೆ ಸಂಬಂಧಿಸದ ಊರುಗಳಿಗೆ ತೆರಳಿ ತಮ್ಮ ವ್ಯಾಪಾರ ಮಾಡುತ್ತಿರುವ ಘಟನೆಗಳು ಕೆಲವೆಡೆ ಕೇಳಿ ಬಂದಿದೆ.
ಇತ್ತೀಚೆಗೆ ಶಿರಸಿ ತಾಲೂಕಿನ ಕಡಬಾಳ ಗ್ರಾಮಕ್ಕೆ ಈ ರೀತಿ ಕೆಲವು ವ್ಯಾಪಾರಸ್ಥರ ವಾಹನಗಳು ಬಂದು, ಮಾರಾಟ ಮಾಡುತ್ತಿದ್ದ ವೇಳೆ ಊರಿನ ಜಾಗೃತ ನಾಗರಿಕರು ಪಾಸ್ ಕೇಳಿದಾಗ ವ್ಯಾಪಾರಸ್ಥ ಇನ್ನೊಂದು ವ್ಯಾಪ್ತಿಯ ಪಾಸ್ ತೋರಿಸಿದ್ದಕ್ಕೆ, ಜನರಿಂದ ಛೀಮಾರಿ ಹಾಕಿಸಿಕೊಂಡು ಹಿಂತಿರುಗಿದ ಘಟನೆ ನಡೆದಿದೆ. ಇದೇ ರೀತಿ ಪಾಸ್ ಇಲ್ಲದೇ ಮನೆಗೆ ತೆರಳಿ ಮಾರಾಟ ಮಾಡುತ್ತಿದ್ದ ಕೆಲವು ವಾಹನವನ್ನು ನಗರದಲ್ಲಿ ಪೋಲೀಸರು ಸೀಜ್ ಮಾಡಿದ್ದಾರೆ ಎಂಬ ಮಾಹಿತಿಯೂ ದೊರಕಿದೆ.
ಹಳ್ಳಿಗಳ ಮೇಲೆ ಇಂತವರ ಕಣ್ಣೇಕೆ ..?
ಕೆಲವೊಂದು ಹಳ್ಳಿಗಳು ನಗರ ಪ್ರದೇಶದಿಂದ ದೂರವಿರುವ ಹಿನ್ನಲೆಯಲ್ಲಿ ಇಲಾಖಾ ತನಿಖಾಧಿಕಾರಿಗಳು ಅಥವಾ ಪೋಲೀಸರು ಕಡಿಮೆ ಇರುತ್ತಾರೆ. ಮತ್ತು ಜನರಿಗೂ ವಸ್ತುಗಳು ಅತೀ ಅವಶ್ಯಕವಾಗಿರುತ್ತದೆ. ಹಾಗಾಗಿ ಹೆಚ್ಚು ದರ ಕೊಟ್ಟಾದರೂ ಗ್ರಾಹಕರು ಕೊಳ್ಳುತ್ತಾರೆ. ಜೊತೆಗೆ ಹಲವರಿಗೆ ಪಾಸ್ ಸೇರಿದಂತೆ ಇನ್ನಿತರ ವಿಚಾರಗಳು ಸಂಹವನ ಕೊರತೆಯಿಂದ ತಿಳಿದಿರುವುದಿಲ್ಲ, ಹಾಗಾಗಿ ತಮ್ಮ ಕೆಲಸ ಸುರುಳಿತ ಎನ್ನುವುದು ಇಂತಹ ಗುಳ್ಳೆ್ನರಿಗಳ ಮನ್ ಕಿ ಬಾತ್..
ಜನತೆ ಜಾಗೃತರಾಗಬೇಕು:
ಒಳ್ಳೆಯ ಉದ್ದೇಶದಿಂದ ಅಧಿಕಾರಿಗಳು ಯೋಜನೆ ಜಾರಿಗೊಳಿಸಿದರೆ, ಅದನ್ನು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧ ಜನತೆ ಜಾಗೃತಗೊಳ್ಳಬೇಕಿದೆ. ಜೊತೆಗೆ ಜನರೂ ಸಹ ತಮ್ಮೂರಿಗೆ ಹಣ್ಣು- ತರಕಾರಿ ಮಾರಲು ಬರುವ ವ್ಯಾಪಾರಸ್ಥರಿಗೆ ಮೊದಲು ಅಧಿಕೃತ ಪಾಸ್ ತೋರಿಸಲು ಹೇಳಬೇಕು. ಪಾಸ್ ಇದ್ದವರ ಬಳಿಯಲ್ಲಿ ಮಾತ್ರ ವ್ಯಾಪಾರ ಮಾಡುವುದು ಉತ್ತಮ. ಒಂದು ವೇಳೆ ಪಾಸ್ ಇಲ್ಲದೇ ವ್ಯಾಪಾರಸ್ಥರು ಬಂದರೆ ಕೂಡಲೇ ಹತ್ತಿರದ ಪೋಲೀಸ್ ಸ್ಟೇಷನ್ ಅಥವಾ ತಾಲೂಕಾಡಳಿತಕ್ಕೆ ಮಾಹಿತಿ ನೀಡಬಹುದಾಗಿದೆ.
euttarakannada.in