ಹಳಿಯಾಳ : ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯನ್ನು ಎರಡು ತಿಂಗಳೊಳಗೆ ನಡೆಸುವಂತೆ ಧಾರವಾಡ ಹೈಕೊರ್ಟ್ ಪೀಠ ಆದೇಶ ನೀಡಿರುವುದು ಕನ್ನಡ ಸಾಹಿತ್ಯ ಪರಿಷತ್ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದು ದಾಂಡೇಲಿ ನಗರದ ಉತ್ತರ ಕನ್ನಡ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ, ಪತ್ರಕರ್ತ, ಲೇಖಕ ಬಿ.ಎನ್.ವಾಸರೆ ಅವರು ಹೇಳಿದ್ದಾರೆ. ಹೈಕೋರ್ಟ್ ಕಸಾಪ ಚುನಾವಣಾಧಿಕಾರಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದೆ. ಇದರಿಂದ ರಾಜ್ಯಾದ್ಯಂತ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಚಟುವಟಿಕೆಗಳು ಪುನಃ ಗರಿಗೆದರಲಾರಂಭಿಸಿದೆ. ಕಳೆದ ಮೇ 9 ರಂದು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ನಿಗದಿಯಾಗಿತ್ತು. ಆದರೆ ಹೆಚ್ಚುತ್ತಿದ್ದ ಕೊರೊನಾ ಸೊಂಕಿನ ಎರಡನೇ ಅಲೆಯ ಭೀತಿಯಿಂದಾಗಿ ಕೇವಲ 13 ದಿನಗಳು ಉಳಿದಿರುವಾಗ ಚುನಾವಣೆಯನ್ನು ಮುಂದೂಡಲಾಗಿತ್ತು. ಎರಡನೆ ಅಲೆಯ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಕಸಾಪ ಚುನಾವಣೆ ನಡೆಸುವಂತೆ ಹಲವು ಸಾಹಿತಿಗಳು ಹಾಗೂ ಚಿಂತಕರು ಮತ್ತು ಕಸಾಪ ಚುನಾವಣಾ ಅಭ್ಯರ್ಥಿಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ಕಸಾಪ ರಾಜ್ಯ ಸಮಿತಿಯ ಚುನಾವಣಾ ಕಣದಲ್ಲಿರುವ ಅಭ್ಯರ್ಥಿ ಕೊಪ್ಪಳದ ಶೇಖರಗೌಡ ಮಾಲಿ ಪಾಟೀಲರು ಚುನಾವಣೆ ಅತಿ ಶೀಘ್ರವಾಗಿ ನಡೆಸಲು ಆದೇಶ ನೀಡುವಂತೆ ಧಾರವಾಡದ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಯಾವುದೇ ಕಾರಣಕ್ಕೂ ಕಸಾಪ ಚುನಾವಣೆಯನ್ನು ನಡೆಸಲು ವಿಳಂಬ ಮಾಡದೇ ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ನಿರ್ದೇಶಿಸಿದೆ. ಅರ್ಜಿದಾರರ ಪರ ನ್ಯಾಯವಾದಿ ಅವಿನಾಶ ಮಾಲಿ ಪಾಟೀಲರು ಸಮರ್ಥವಾಗಿ ವಾದ ಮಂಡಿಸಿದ್ದರು. ನ್ಯಾಯಾಲಯ ನೀಡಿರುವ ಈ ತೀರ್ಪಿನಂತೆ ಅಕ್ಟೋಬರ್ ಕೊನೆಯಲ್ಲಿ ಅಥವಾ ನವೆಂಬರ್ ಮೊದಲ ವಾರದಲ್ಲಿ ಕಸಾಪ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ.ಚುನಾವಣೆ ಮುಂದೂಡುವ ಸಂದರ್ಭದಲ್ಲಿ ಈ ಹಿಂದಿನಂತೆ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಚುನಾವಣೆ ನಡೆಸಲಾಗುವುದೆಂದು ಉಲ್ಲೇಖಿಸಲಾಗಿರುವ ಹಿನ್ನೆಲೆಯಲ್ಲಿ ಈಗ ನಡೆಯುವ ಚುನಾವಣೆಯಲ್ಲಿ ಯಾವುದೇ ಹೊಸ ಪ್ರಕ್ರೀಯೆಗಳಿಗೆ ಅವಕಾಶ ನಿಡದೇ ಇದ್ದ ಸ್ಥಿತಿಯಲ್ಲಿಯೇ ನಡೆಯಲಿದೆ. ಒಟ್ಟಾರೆ ಕಳೆಗುಂದಿದ್ದ ಕಸಾಪ ಚುನಾವಣೆ ಈಗ ಮರುಜೀವ ಬಂದಿದ್ದು, ಸ್ಪರ್ಧಾಕಣದಲ್ಲಿರುವ ಅಭ್ಯರ್ಥಿಗಳು ಮಗದೊಮ್ಮೆ ಉತ್ಸಾಹದಿಂದ ಚುನಾವಣಾ ಪ್ರಚಾರದಲ್ಲಿ ಧುಮುಕಲು ಸಾದ್ಯವಾಲಿದೆ ಎಂದು ದಾಂಡೇಲಿ ನಗರದ ಉತ್ತರ ಕನ್ನಡ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ, ಪತ್ರಕರ್ತ, ಲೇಖಕ ಬಿ. ಎನ್. ವಾಸರೆ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಸಾಪ ಚುನಾವಣೆ ನಡೆಸಲು ಕೋರ್ಟ್ ಸೂಚನೆ
