ಶಿರಸಿ: ಸೂರ್ಯನಾರಾಯಣ ಪ್ರೌಢಶಾಲೆ ಬಿಸಲಕೊಪ್ಪದಲ್ಲಿ ಸೆ. 16 ರಂದು `ವಿಶ್ವ ಒಝೋನ್ ದಿನಾಚರಣೆ’ಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಒಝೋನ್ ಸಂರಕ್ಷಣೆ ಕುರಿತು ಮಕ್ಕಳ ಚಿತ್ರಕಲಾ ಪ್ರದರ್ಶನ ಮತ್ತು ಕರಕುಶಲ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಶಿರಸಿಯ ಡಿ.ಎಫ್.ಒ ಎಸ್.ಜಿ.ಹೆಗಡೆ ಮಾತನಾಡಿ ನಮಗಾಗಿ ಪರಿಸರವನ್ನು ಉಳಿಸಿಕೊಳ್ಳಬೇಕೇ ಹೊರತು ಪರಿಸರಕ್ಕೆ ನಮ್ಮ ಅಗತ್ಯವಿಲ್ಲ. ನವನವೋನ್ವೇಶ ಶಾಲಿನಿಯಾದ ಈ ಪರಿಸರದಲ್ಲಿ ನಮ್ಮ ಅಸ್ತಿತ್ವ ಎಲ್ಲಿದೆ ಎಂದು ನಾವು ತಿಳಿಯಬೇಕಾದುದು ಇಂದಿನ ಅಗತ್ಯ ಎಂದರು.
ವಿದ್ಯಾರ್ಥಿಗಳು ಉತ್ಸಾಹದಿಂದ ವಿವಿಧ ಚಾರ್ಟ ಮತ್ತು ಕರಕುಶಲ ವಸ್ತು ತಯಾರಿಸಿದ್ದು, ಓಝೋನ್ ಮಹತ್ವವನ್ನು ಸಾರುವಂತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಮಕ್ಕಳನ್ನು ಪ್ರೋತ್ಸಾಹಿಸಿದ ಶಿಕ್ಷಕರು ಅಭಿನಂದನಾರ್ಹರು ಎಂದರು.
ಸಂಸ್ಥೆಯ ಅಧ್ಯಕ್ಷ ಎಸ್. ಎಮ್.ಹೆಗಡೆ ಹುಡೆಲಕೊಪ್ಪ ಮಾತನಾಡುತ್ತ ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶ್ರೀಧರ ನಾಯಕ, ಕಾರ್ಯದರ್ಶಿ ಜಿ.ವಿ ಹೆಗಡೆ, ಬನವಾಸಿ ವಲಯ ಸಂರಕ್ಷಣಾಧಿಕಾರಿ ಉಷಾ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಗಣೇಶ ಭಟ್ಟ ವಾನಳ್ಳಿ ಸ್ವಾಗತಿಸಿದರು. ಗಣೇಶ ಸಾಯಿಮನೆ ನಿರೂಪಿಸಿದರು. ಲೋಕನಾಥ ಹರಿಕಂತ್ರ ವಂದಿಸಿದರು.