ಯಲ್ಲಾಪುರ: ಸಾವಯವ ಕೃಷಿ ಪರಿವಾರ ಮತ್ತು ಕೃಷಿ ಇಲಾಖೆ ಆಶ್ರಯದಲ್ಲಿ ರೈತರೊಂದಿಗೆ ಒಂದು ದಿನ ಅನ್ನದಂಗಳದ ಮಾತುಕತೆ ಕಾರ್ಯಕ್ರಮ ಡೋಂಗ್ರಿ ಪಂಚಾಯತ ವ್ಯಾಪ್ತಿಯ ಕೈಗಡಿಯಲ್ಲಿ ಸೆ. 18 ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಏರ್ಪಡಿಸಿದೆ. ರೈತರ ಕಷ್ಟ, ಸುಖ, ಬೇಡಿಕೆಯ ಧ್ವನಿಯನ್ನು ಸರಕಾರಕ್ಕೆ ತಲುಪಿಸುವುದರ ಜೊತೆಗೆ ರೈತರ ಕುರಿತಾದ ಚಿಂತನೆ ಈ ಅನ್ನದಂಗಳ ಕಾರ್ಯಕ್ರಮದಲ್ಲಿ ನಡೆಯಲಿದೆ.
ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆಯವರು ದಿನವಿಡೀ ರೈತರೊಟ್ಟಿಗೆ ಅನ್ನದಂಗಳದ ಮಾತುಕತೆ ಕಾರ್ಯಕ್ರಮದಲ್ಲಿ ಇರುತ್ತಾರೆ. ಈ ಊರಿನ ವಿಶೇಷ ಎರಡು ಭತ್ತದ ತಳಿಯ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಸಾವಯವ ಸೇರಿದಂತೆ ಮಾದರಿ ರೈತರೊಂದಿಗೆ, ಓದಿ ವೃತ್ತಿ ಬಿಟ್ಟು ಮನೆಗೆ ಬಂದು ಕೃಷಿ ಮಾಡುತ್ತಿರುವವರೊಂದಿಗೆ, ಸಾವಯವ ಬೇಸಾಯಗಾರರೊಂದಿಗೆ ಮಾತುಕತೆ ಸಂವಾದ ನಡೆಸಲಿದ್ದಾರೆ.
ತನ್ನ ಹುಟ್ಟುಹಬ್ಬವನ್ನು ಕೈಗಡಿಯಲ್ಲಿ ನಡೆಯುವ ಅನ್ನದಂಗಳದ ಮಾತುಕಥೆ ಕಾರ್ಯಕ್ರಮದಲ್ಲಿ ಆಚರಿಸುವುದಾಗಿ ಹೇಳಿಕೊಂಡಿರುವ ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್. ವಿಶೇಷ ಉಪಸ್ಥಿತಿಯೊಂದಿಗೆ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್, ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜಿಲ್ಲೆಯ ಶಾಸಕರು, ನಿಗಮದ ಅಧ್ಯಕ್ಷರುಗಳು ವಿವಿಧ ಸ್ಥರದ ಜನಪ್ರತಿನಿಧಿಗಳು, ತೋಟಗಾರಿಕೆ, ಕೃಷಿ ಹಿರಿಯ ಅಧಿಕಾರಿಗಳು, ಕೃಷಿ ತೋಟಗಾರಿಕೆ ಕ್ಷೇತ್ರದ ಸಾಧಕರು ಪಾಲ್ಗೊಳ್ಳಲಿದ್ದಾರೆ.
ಜಿಲ್ಲೆಯ ಸಾಧಕ ರೈತರನ್ನು ಆಹ್ವಾನಿಸಲಾಗಿದೆ. ಕೃಷಿ, ತೋಟಗಾರಿಕೆಯಲ್ಲಿ ಸಾಂಪ್ರದಾಯ ಕತೆ, ಬಿತ್ತನೆ ಬೀಜ, ವಿಶೇಷ ತಳಿ, ಹೋಮ ಪ್ರಾಡಕ್ಟ್, ನವಗ್ರಹವನ, ಔಷಧಿ ಸಸ್ಯ,ಸೇರಿದಂತೆ ಹಲವು ಮಾಹಿತಿಯನ್ನೊಳಗೊಂಡ ಪ್ರದರ್ಶನವನ್ನು ಈ ಕಾರ್ಯಕ್ರಮದಲ್ಲಿ ಜೋಡಿಸಿದೆ.
ಹೊಸ ಆಯಾಮ ಸೃಷ್ಟಿಸಲಿದೆ ಕಾರ್ಯಕ್ರಮ:
ರಸ್ತೆ ಸಂಚಾರ ದುರ್ಗಮ ವ್ಯವಸ್ಥೆಯಾಗಿದ್ದರೂ ಇಂತಹ ಹಳ್ಳಿಮೂಲೆಯಲ್ಲೊಂದು ಪ್ರಕೃತಿಯ ಮಡಿಲಿನಂತಿರುವ ಕೈಗಡಿಯಲ್ಲಿ ಐತಿಹಾಸಿಕವಾದ ಕಾರ್ಯಕ್ರಮ ಸಂಯೋಜನೆ ಆಗಿದ್ದು ವಿಶೇಷ.ಇದಕ್ಕಾಗಿ ಕೈಗಡಿ ಸುತ್ತಮುತ್ತಲಿನ ಕೃಷಿಕರು ಸಾವಯವ ಪರಿವಾರದ ಕಾರ್ಯಕರ್ತರ ಒತ್ತಾಸೆಯ ಕಾರ್ಯಕ್ರಮ ಇದಾಗಿದ್ದು ಹೊಸ ಆಯಾಮವನ್ನು ಸೃಷ್ಠಿಸಲಿದೆ ಎನ್ನುತ್ತಾರೆ ಅನ್ನದಂಗಳ ಕಾರ್ಯಕ್ರಮದ ನೇತೃತ್ವ ವಹಿಸಿದ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆನಂದ.ಅ.ಶ್ರೀ.
ಭರದ ಸಿದ್ಧತೆ:
ಅನ್ನದಂಗಳದಲ್ಲಿ ಮಾತುಕಥೆ ಕಾರ್ಯಕ್ರಮದ ಸಂಬಂದ ರಸ್ತೆ ಸುಧಾರಣೆ ಕಾರ್ಯ ಸಾರ್ವಜನಿಕರಿಂದ ನಡೆಯುತ್ತಿದೆ. ಮಳೆ ಬಿಡುವು ನೀಡಿದ್ದು ಕಾರ್ಯಕ್ರಮದ ತಯಾರಿಗೆ ಅನುಕೂಲವಾಗಿದ್ದು ಜನರು ಬರುವುದಕ್ಕೆ ಹೋಗುವುದಕ್ಕೆ ಅನುಕೂಲವಾಗುವಂತೆ ಏಳೆಂಟು ಕಿ.ಮೀ ಕೈಗಡಿ ಇಕ್ಕಟ್ಟಾದ ರಸ್ತೆ ಸುಧಾರಣೆ ಕಾರ್ಯ ಸಾರ್ವಜನಿಕರಿಂದ ನಡೆಯುತ್ತಿದೆ. ಕೈಗಡಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಮಳೆಯ ನಡುವೆಯೂ ಜನರಿಗೆ ಸೂಕ್ತವಾದ ವ್ಯವಸ್ಥೆ ಕಲ್ಪಿಸುವ ಕೋವಿಡ್ ನಿಯಮದ ಪೆಂಡಾಲ್ ಗಳು ಸಿದ್ಧಗೊಂಡಿದೆ. ಕಾರ್ಯಕ್ರಮದ ತಯಾರಿಯಲ್ಲಿ ಇಲಾಖೆ ಮತ್ತು ಸಂಘಟಕರು ತೊಡಗಿಕೊಂಡಿದ್ದಾರೆ.
ಭೋಟಿಯಲ್ಲಿ ಪಯಣ: ಕಡಿದಾದ ರಸ್ತೆಯಲ್ಲಿ ಪಯಣ:
ಕೆಲವರಿಗೆ ಕೈಗಡಿಯಂತಹ ಮೂಲೆಯಲ್ಲೇಕೆ ಎಂದು ಪ್ರಶ್ನಿಸಿಕೊಂಡವರಿಗೂ ಇಂತಹದ್ದೊಂದು ಊರಲ್ಲಿ ಮಳೆಗಾಲದಲ್ಲಿ ದ್ವೀಪವಾಗಬಹುದಾದ ಕೈಗಡಿಯಲ್ಲಿ ಕಾರ್ಯಕ್ರಮ ನಡೆಯುವ ಮೂಲಕ ಉತ್ತರ ಸಿಗಲಿದೆ. ಬೋಟಿಯಲ್ಲಿ ಪಯಣ, ಇಕ್ಕಟ್ಟಾದ ರಸ್ತೆಯಲ್ಲಿ ಪಯಣ ಅನೇಕರಿಗೆ ಹೊಸತನವಾಗಿದೆ. ಕೇಂದ್ರ ಸಚಿವರೇ ಈ ರಸ್ತೆ ಬೋಟಿಯಲ್ಲಿ ನಮ್ಮಂತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬರುತ್ತಿರುವುದು ವಿಶೇಷವಾಗಿದೆ