ಕುಮಟಾ: ಪಟ್ಟಣದ ಹೊಸಹಿತ್ತಲಿನ ವಿವಿಧೆಡೆ ಐದು ದಿನ ಪೂಜಿಸಲಾದ ಗಣಪನ ಮೂರ್ತಿಗಳನ್ನು ದೈವಜ್ಞ ಬ್ರಾಹ್ಮಣ ಸಮಾಜದವರು ಮಂಗಳವಾರ ವಿಶೇಷವಾಗಿ ಗುಮಟೆಪಾಂಗ್ ಭಜನೆಯೊಂದಿಗೆ ಮೆರವಣಿಗೆ ಮೂಲಕ ಮೀನು ಮಾರುಕಟ್ಟೆ ಬಳಿಯ ತಾರಿಬಾಗಿಲಿನ ಹಳ್ಳಕ್ಕೆ ಕೊಂಡೊಯ್ದು ವಿಸರ್ಜಿಸಿದರು.
ಹೊಸಹಿತ್ತಲಿನ ದೈವಜ್ಞ ಬ್ರಾಹ್ಮಣ ಸಮಾಜದವರು ಗುಮಟೆಪಾಂಗ್ ಭಜನೆ ಸಂಪ್ರದಾಯವನ್ನು ಬ್ರಿಟಿಷ್ ಕಾಲದಿಂದಲೂ ನಡೆಸಿಕೊಂಡು ಬಂದಿದ್ದು, ಈ ಸಂಪ್ರದಾಯ ಕುಮಟಾದಲ್ಲಿ ಹೊರತುಪಡಿಸಿ, ಜಿಲ್ಲೆಯ ಬೇರೆಲ್ಲೂ ಕಾಣಸಿಗದು. ಪ್ರತಿ ಬಾರಿ ಗಣಪತಿ ವಿಸರ್ಜನಾ ಮೆರವಣಿಗೆಯನ್ನು ವೀಕ್ಷಿಸಲು ನೂರಾರು ಜನ ಸೇರುತ್ತಾರೆ. ಆದರೆ ಈ ಬಾರಿ ಕೊರೊನಾ ನಿಯಮಾವಳಿಯಂತೆ ಸರಳವಾಗಿ ಮೆರವಣಿಗೆ ನಡೆಯಿತು.
ವಿಸರ್ಜನಾ ಮೆರವಣಿಗೆಯೂದ್ದಕ್ಕೂ ದೈವಜ್ಞ ಬ್ರಾಹ್ಮಣ ಸಮಾಜದವರು ಹೆರವಟ್ಟಾದ ಮುಖ್ಯ ರಸ್ತೆ, ಗಿಬ್ ಸರ್ಕಲ್, ಸುಭಾಸ ರಸ್ತೆ, ಪಿಕ್‍ಅಪ್ ಬಸ್ ಸ್ಟ್ಯಾಂಡ್, ಹೆಡ್ ಬಂದರ್ ಕ್ರಾಸ್‍ನಲ್ಲಿ ಗಣೇಶನನ್ನು ಕೂರಿಸಿ, ಗುಮಟೆಪಾಂಗ್ ಭಜನೆಯ ಜೊತೆಗೆ ಗಣೇಶನನ್ನು ಸ್ತುತಿಸುತ್ತ ಮೆರವಣಿಗೆ ತೆರಳಿ ಮೀನು ಮಾರುಕಟ್ಟೆ ಬಳಿಯ ಹಳ್ಳದಲ್ಲಿ ವಿಸರ್ಜಿಸಿದರು.ಗಣಪತಿಬೊಪ್ಪ ಮೋರಯ ಮಂಗಳಮೂರ್ತಿ ಮೋರಯ ಎಂಬ ಜಯ ಘೋಷದ ಮೂಲಕ ಗಣಪನಿಗೆ ಅಂತಿಮ ವಿದಾಯ ಸಲ್ಲಿಸಲಾಯಿತು.
ಮೆರವಣಿಗೆಯೂದಕ್ಕೂ ಹಾಲಕ್ಕಿ ಸಮಾಜ ಸೇರಿದಂತೆ ಇತರೆ ಸಮಾಜದ ಜನರು ಕೂಡ ಪಾಲ್ಗೊಂಡಿದ್ದರು.