ಯಲ್ಲಾಪುರ: ರಾಜ್ಯ ಹೆದ್ದಾರಿ ಯಲ್ಲಾಪುರ-ಶಿರಸಿ ರಸ್ತೆಯಂಚಿಗೆ ದೊಡ್ಡ-ದೊಡ್ಡ ಮರಗಳು ರಸ್ತೆಗೆ ಬಾಗಿಕೊಂಡಿದ್ದು, ಭೈರುಂಬೆ ಗ್ರಾಪಂ ವತಿಯಿಂದ ಮರ ಕಟಾವಿಗೆ ಸಾಕಷ್ಟು ಬಾರಿ ಠರಾವು ಮಂಡಿಸಿದರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪ ವ್ಯಕ್ತಪಡಿಸುತ್ತಿದ್ದಾರೆ.
ಶಿರಸಿ ಸಮೀಪದ ಬೊಮ್ಮನಳ್ಳಿ ಕಡವೆ ಕ್ರಾಸ್ ನಿಂದ ಭೈರುಂಬೆವರೆಗೆ ಬಹಳ ದೊಡ್ಡ ದೊಡ್ಡ ಮರಗಳು ಬೆಳೆದು ರಸ್ತೆಗೆ ವಾಲಿ ನಿಂತಿದೆ. ಇದರಿಂದ ಮಳೆಗಾಲ ಬಂದಾಗ ಪ್ರತಿ ಬಾರಿ ಮರಗಳು ಬಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಜೊತೆಗೆ ಮರಗಳು ರಸ್ತೆ ಬದಿಗೆ ವಾಲಿರುವುದರಿಂದ ರಸ್ತೆಯಲ್ಲಿ ಓಡಾಟ ಮಾಡುವ ವಾಹನಗಳ ಮೇಲೆ ಬೀಳುವ ಆತಂಕ ಎದುರಾಗಿದೆ. ಈ ಹಿಂದೆ ತಾಲೂಕಿನ ಭೈರುಂಬೆ ಗ್ರಾ. ಪಂ ವ್ಯಾಪ್ತಿಯಲ್ಲಿ ರಸ್ತೆ ಬದಿಗೆ ವಾಲಿದ ಮರಗಳನ್ನು ಅರಣ್ಯ ಇಲಾಖೆಯ ವತಿಯಿಂದ ಕಟಾವು ಮಾಡುವಂತೆ ಗ್ರಾಮ ಸಭೆಗಳಲ್ಲಿ ವಿನಂತಿಸಲಾಗಿತ್ತು. ಈ ಜೊತೆಗೆ ಮರ ಕಟಾವಿಗೆ ಗ್ರಾ.ಪಂ ವತಿಯಿಂದ ಅನೇಕ ಬಾರಿ ಠರಾವು ಕೂಡ ಮಂಡಿಸಲಾಗಿತ್ತು. ಆದರೆ ಗ್ರಾ.ಪಂ ಠರಾವನ್ನು ಗಣನೆಗೆ ತೆಗೆದುಕೊಳ್ಳದೇ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ಗ್ರಾ. ಪಂ ಸದಸ್ಯರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಭೈರುಂಬೆ ಗ್ರಾ.ಪಂ ವ್ಯಾಪ್ತಿಯಲ್ಲಿ ರಸ್ತೆ ಬದಿಗೆ ವಾಲಿದ ಮರಗಳ ಕಟಾವಿಗೆ ಈಗಾಗಲೇ ಪರವಾನಗಿ ದೊರೆತಿದೆ. ಆದರೆ ಹೆಚ್ಚಿನ ಮಳೆ ಇರುವ ಕಾರಣ ಮರ ಕಟಾವಿಗೆ ಜನರ ಕೊರತೆ ಎದುರಾಗಿದೆ. ಭೈರುಂಬೆ ಗ್ರಾ. ಪಂ ವ್ಯಾಪ್ತಿಯ 3 ಕಡೆಗಳಲ್ಲಿ ಮರಕಟಾವು ಮಾಡಬೇಕು ಎಂದು ಡಿಎಫ್‍ಓ ರಿಂದ ಪರವಾನಿಗೆ ಸಿಕ್ಕಿದೆ. ಇನ್ನೆರಡು ತಿಂಗಳ ಒಳಗೆ ಮರ ಕಟಾವು ಮಾಡಲಾಗುವುದು ಎಂದು ಹುಲೇಕಲ್ ವ್ಯಾಪ್ತಿಯ ಆರ್‍ಎಫ್‍ಒ ಬಸವರಾಜ್ ತಿಳಿಸಿದರು. ಒಟ್ಟಾರೆ ರಸ್ತೆ ಬದಿಗೆ ಜನರಿಗೆ ಆತಂಕ ಒಡ್ಡಿದ ಮರಗಳಿಂದ ಜನರಿಗೆ ತೊಂದರೆ ಆಗುವ ಮೊದಲು ಕಟಾವು ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.