• Slide
    Slide
    Slide
    previous arrow
    next arrow
  • ಉದ್ಯೋಗ ಖಾತರಿ ಯೋಜನೆಯಡಿ 260 ಕಾಮಗಾರಿಗೆ ಅವಕಾಶ; ಒಂಬುಡ್ಸಮನ್ ಆರ್.ಜಿ.ನಾಯ್ಕ

    300x250 AD

    ಶಿರಸಿ: ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಸಮುದಾಯ ಹಾಗು ವೈಯಕ್ತಿಕವಾಗಿ 260 ವಿವಿಧ ಕಾಮಗಾರಿಗೆ ಅವಕಾಶವಿದೆ. ಆದರೆ ಈ ಬಗ್ಗೆ ಅನುಷ್ಠಾನ ಅಧಿಕಾರಿಗಳಿಗೆ ಮಾಹಿತಿ ಇರುವುದಿಲ್ಲ ಎಂದು ನರೇಗಾ ಜಿಲ್ಲಾ ಒಂಬುಡ್ಸಮನ್ ಆರ್.ಜಿ.ನಾಯ್ಕ ಸಲಹೆ ನೀಡಿದರು.


    ನಗರದ ತಾಪಂ ಸಭಾಭವನದಲ್ಲಿ ಬುಧವಾರ ನರೇಗಾ ಯೋಜನೆ ಅನುಷ್ಠಾನಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗು ತಾಂತ್ರಿಕ ಸಿಬ್ಬಂದಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅನುಷ್ಠಾನಾಧಿಕಾರಿಗಳು ಯೋಜನೆಯ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಂಡು ಜನರಿಗೆ ಇದರ ಉಪಯೋಗ ದೊರೆಯುವಂತೆ ಮಾಡಬೇಕು ಎಂದರು. ನೀರು, ಕಟ್ಟಡ, ರಸ್ತೆ ನಿರ್ಮಾಣ, ಕೆರೆ ಹೂಳೆತ್ತುವುದು, ಶಾಲಾ ಕಂಪೌಂಡ್, ದನದ ಕೊಟ್ಟಿಗೆ, ತೋಟಗಾರಿಕಾ ಬೆಳೆ ಕ್ಷೇತ್ರಕ್ಕೆ ಸಂಬಂಧಿಸಿ ಹೊಸ ತೋಟ ಹಾಗೂ ಇರುವ ತೋಟ ಪುನಶ್ಚೇತನಕ್ಕೆ ಅವಕಾಶ ಕಲ್ಪಿಸಲು ಈ ಯೋಜನೆಯಡಿ ಆದ್ಯತೆ ನೀಡಬಹುದು. ಯೋಜನೆಯಲ್ಲಿ ಶೇ.20ರಷ್ಟು ಅರಣ್ಯೀಕರಣಕ್ಕೆ ಬಳಸಲು ಅವಕಾಶವಿದೆ. ಇವೆಲ್ಲದರ ಬಗ್ಗೆ ಅರಿವು ಬೇಕು ಎಂದು ತಿಳಿಸಿದರು. ಮುಂದಿನ ಸಾಲಿನ ಕ್ರಿಯಾಯೋಜನೆಗೆ ಅಕ್ಟೋಬರ್‍ನಿಂದ ಮಾರ್ಚವರೆಗೆ ಅವಕಾಶವಿದೆ. ನಂತರವೂ ಹೆಚ್ಚುವರಿ ಕ್ರಿಯಾಯೋಜನೆ ಮಾಡಬಹುದು ಎಂದರು.


    ಉದ್ಯೋಗ ಖಾತ್ರಿಯಲ್ಲಿ ನಿಯಮಾನುಸಾರ ಕೆಲಸ ಮಾಡಿ, ನಿಯಮ ವಿರುದ್ಧವಾಗಿ ಕೆಲಸ ಮಾಡಿ ಎಂದು ಯಾರೇ ಹೇಳಿದರೂ ಮಾಡಬೇಡಿ, ಯೋಜನೆಯ ಕೆಲಸಕ್ಕೆ ಯಂತ್ರವನ್ನು, ಗುತ್ತಿಗೆದಾರರನ್ನು ಬಳಸಲು ಅವಕಾಶವಿಲ್ಲ. ಒಂಬುಡ್ಸಮನ್ ಆಗಿ ನಾನಂತೂ ಯಾರಿಗೂ ಜಗ್ಗುವುದಿಲ್ಲ, ಬಗ್ಗುವುದೂ ಇಲ್ಲ ಎಂದು ಒಂಬುಡ್ಸಮನ್ ಆರ್.ಜಿ.ನಾಯ್ಕ ಖಡಕ್ಕಾಗಿ ಹೇಳಿದರು.

    300x250 AD

    ಕೇವಲ 7ಕೋಟಿ ರೂ.ಕಾಮಗಾರಿ:
    ಶಿರಸಿ ತಾಲೂಕಿನ 31 ಗ್ರಾ.ಪಂಚಾಯತಗಳಲ್ಲಿ ಕೇವಲ 7 ಕೋಟಿ ರೂ. ಮಾತ್ರ ಕಾಮಗಾರಿಗೆ ಅನುಷ್ಠಾನವಾಗಿದ್ದು, 75ಕೋಟಿ ರೂ.ಕ್ರಿಯಾಯೋಜನೆ ತಯಾರಿಸಲಾಗಿತ್ತು. 35ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದರೂ ಜಾಬ್ ಕಾರ್ಡ್ ನೀಡಿದ್ದು 23ಸಾವಿರ ಕುಟುಂಬಕ್ಕೆ ಮಾತ್ರ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಯೋಜನೆ ಅನುಷ್ಠಾನದಲ್ಲಿ ನಿಷ್ಕಾಳಜಿ ತೋರಬಾರದು. ಉತ್ತಮ ಪ್ರಗತಿ ತೋರಲೇಬೇಕು ಎಂದು ಸೂಚಿಸಿದರು.

    ತಾಪಂ ಕಾರ್ಯನಿರ್ವಹನಾ ಅಧಿಕಾರಿ ಎಫ್.ಜಿ.ಚಿನ್ನಣ್ಣನವರ್ ಉಪಸ್ಥಿತರಿದ್ದರು.

    ಜಾಬ್ ಕಾರ್ಡ್ ಕೊಡಿ:
    ಸರಕಾರಿ ನೌಕರಿಗೆ ಹೊರತುಪಡಿಸಿ ಎಲ್ಲರಿಗೂ ಜಾಬ್ ಕೊಡಬಹುದು ಎಂದು ನರೇಗಾ ಕಾಯ್ದೆಯಲ್ಲಿ ಇದೆ. ಜಿಲ್ಲೆಯಲ್ಲಿ 2.65ಲಕ್ಷ ಕುಟುಂಬಗಳಲ್ಲಿ 1.5ಲಕ್ಷ ಕುಟುಂಬಕ್ಕೆ ಮಾತ್ರ ಜಾಬ್ ಕಾರ್ಡ್ ನೀಡಲಾಗಿದೆ. ಇನ್ನು 1ಲಕ್ಷ ಕುಟುಂಬಕ್ಕೆ ನೀಡಬೇಕಾಗಿದೆ. ಅವರೆಲ್ಲ ಉದ್ಯೋಗವಿಲ್ಲದೇ ವಂಚಿತರಾಗಬಾರದು. ಅವರು ಅರ್ಜಿ ನೀಡಿದ ಮೇಲೆಯೇ ಈ ಕಾರ್ಡ್ ವಿತರಣೆ ಮಾಡಬೇಕು ಎಂದು ಸುಮ್ಮನೆ ಕೂರಬಾರದು. ಅಧಿಕಾರಿಗಳು ಸ್ವಯಂ ಆಸಕ್ತಿ ತೆಗೆದುಕೊಂಡು ಈ ಕೆಲಸ ಮಾಡಬೇಕು ಎಂದು ಒಂಬುಡ್ಸಮನ್ ಆರ್.ಜಿ.ನಾಯ್ಕ ಸೂಚಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top