ಶಿರಸಿ: ಕಳೆದ ಹದಿನೆಂಟು ವರ್ಷಗಳಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸುವ ಮೂಲಕ ಅವರನ್ನು ಕಲಿಕೆಯೆಡೆಗೆ ಉತ್ತೇಜಿಸುತ್ತ ಬಂದಿರುವ ಸಮಾಜ ಸೇವಕ, ಶಿಕ್ಷಣ ಪ್ರೇಮಿ, ದಾನಿಗಳಾದ ಹಾಗೂ ಲಯನ್ಸ ಶಾಲೆಯ ಪಾಲಕರಾದ ಉಪೇಂದ್ರ ಪೈ ಅವರು ತಮ್ಮ ಉಪೇಂದ್ರ ಪೈ ಸೇವಾ ಟ್ರಸ್ಟ್ ವತಿಯಿಂದ ಸೆ.15 ಬುಧವಾರ ದಂದು ಲಯನ್ಸ್ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೋಟ್‍ಬುಕ್ ಹಾಗೂ ಶಿಕ್ಷಕರಿಗೆ ನೋಟಬುಕ್ ನೊಂದಿಗೆ ಫೈಲ್ ವಿತರಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ತಮ್ಮ ಸೇವಾ ಟ್ರಸ್ಟ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಪಿ.ಯು.ವಿದ್ಯಾರ್ಥಿಗಳ ಶುಲ್ಕ ಪಾವತಿಗೆ ಧನ ಸಹಾಯ, ಶಾಲೆಗಳಿಗೆ ಆಟೋಪಕರಣಗಳ ವಿತರಣೆ ಹಾಗೂ ಇನ್ನಿತರ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ, ಕ್ರೀಡಾ ಹಾಗೂ ಕೋವಿಡ್ ಸಂದರ್ಭದಲ್ಲಿ ಟ್ರಸ್ಟ್ ಮೂಲಕ ಕೈಗೊಂಡ ಸೇವಾ ಕಾರ್ಯಗಳನ್ನು ವಿವರಿಸಿದರು. ಅಲ್ಲದೆ ತಮ್ಮ ಶಾಲಾ ದಿನಗಳಲ್ಲಿ ತಾವು ಎದುರಿಸಿದ ಸವಾಲುಗಳನ್ನು ಸ್ಮರಿಸುತ್ತ, ತಾವು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಬೇಕೆಂಬ ಮಹದಾಸೆ ಹೊಂದಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲಯನ್ ಎನ್.ವಿ.ಜಿ.ಭಟ್ ಅವರು ಮಾತನಾಡುತ್ತಾ ಉಪೇಂದ್ರ ಪೈ ಅವರ ಈ ಕಾರ್ಯವನ್ನು ಶ್ಲಾಘಿಸುತ್ತಾ ವಿದ್ಯಾರ್ಥಿಗಳಿಗೆ ಇದು ಮಾದರಿಯಾಗಿರಬೇಕೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಉದಯ್ ಸ್ವಾದಿ, ಲಯನ್ಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಲಯನ್ ಪ್ರೊ. ರವೀಂದ್ರ ನಾಯಕ್ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಲಯನ್ ಪ್ರಭಾಕರ ಹೆಗಡೆ ಉಪಸ್ಥಿತರಿದ್ದರು.
ಲಯನ್ಸ್ ಶಾಲೆಯ ಮುಖ್ಯಾಧ್ಯಾಪಕ ಶಶಾಂಕ್ ಹೆಗಡೆ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಲಯನ್ ಪ್ರೊ. ರವೀಂದ್ರ ನಾಯಕ್ ಅವರು ವಂದಿಸಿದರು.