ಯಲ್ಲಾಪುರ: ಸರಕಾರದ ರೈತಪರ ಕಾರ್ಯಕ್ರಮಗಳಲ್ಲೊಂದಾದ ರೈತರೊಟ್ಟಿಗೆ ಅನ್ನದಂಗಳದಲ್ಲಿ ಮಾತುಕಥೆ ಕಾರ್ಯಕ್ರಮವನ್ನು ವಿಶಿಷ್ಠವಾದ ಮತ್ತು ವಿನೂತನವಾದ ರೀತಿಯಲ್ಲಿ ಪಟ್ಟಣ ಪ್ರದೇಶದಿಂದ ಅತೀ ದೂರದಲ್ಲಿರುವ ಕುಗ್ರಾಮ ಕೈಗಡಿಯಲ್ಲಿ ಸೆ.18 ರಂದು ಶನಿವಾರ ಬೆಳಿಗ್ಗಿನಿಂದ ಸಂಜೆಯವರೆಗೆ ಹಮ್ಮಿಕೊಂಡಿದ್ದು ರೈತರ ಕಷ್ಟ, ಸುಖ, ಬೇಡಿಕೆ, ಧ್ವನಿಯನ್ನು ಸರಕಾರಕ್ಕೆ ತಲುಪಿಸುವ ಕೆಲಸ ಹಾಗೂ ರೈತರ ಕುರಿತಾದ ಚಿಂತನೆ ಈ ಕಾರ್ಯಕ್ರಮದ ಉದ್ದೇಶ ಎಂದು ಸಾವಯವ ಕೃಷಿ ಮಿಷನ್ ಅಧ್ಯಕ್ಷ ಎ.ಎಸ್.ಆನಂದ ತಿಳಿಸಿದರು.
ಅವರು ಕೈಗಡಿಯಲ್ಲಿ ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆಯವರು ದಿನವಿಡಿ ಈ ರೈತರೊಟ್ಟಿಗೆ ಅನ್ನದಂಗಳ ಕಾರ್ಯಕ್ರಮದಲ್ಲಿ ಇರುತ್ತಾರೆ. ಈ ಊರಿನ ವಿಶೇಷ ತಳಿಯ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಸಾವಯವ ಸೇರಿದಂತೆ ಮಾದರಿ ರೈತರೊಂದಿಗೆ, ವಿವಿಧ ಪರಿವಾರ ಸಂಘ-ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕಥೆ ಸಂವಾದ ನಡೆಸಲಿದ್ದಾರೆ. ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿರುವ ಈ ಕಾರ್ಯಕ್ರಮ ನಮ್ಮ ಈ ಊರಿನ ಪಾಲಿಗೆ ಬಂದಿರುವುದು ವಿಶೇಷವಾಗಿದ್ದು.
ಕಾರ್ಯಕ್ರಮದಲ್ಲಿ ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್, ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಸಂಸದರು, ಜಿಲ್ಲೆಯ ಶಾಸಕರು, ನಿಗಮದ ಅಧ್ಯಕ್ಷರುಗಳು, ವಿಧಾನಪರಿಷತ್ ಸದಸ್ಯರು ವಿವಿಧ ಸ್ಥರದ ಜನಪ್ರತಿನಿಧಿಗಳು, ತೋಟಗಾರಿಕೆ, ಕೃಷಿ ಹಿರಿಯ ಅಧಿಕಾರಿಗಳು, ಕೃಷಿ ತೋಟಗಾರಿಕೆ ಕ್ಷೇತ್ರದ ಸಾಧಕರು ಪಾಲ್ಗೊಳ್ಳಲಿದ್ದಾರೆ.
ಇಲಾಖೆ- ಅಧಿಕಾರಿಗಳ ಜೊತೆ ರೈತರ ಸ್ಥಾನಿಕ ಗ್ರಾಮಸ್ಥರ ಪಾತ್ರ ಪ್ರಾಮುಖ್ಯವಾದುದು ಎಂದ ಅವರು ಜಿಲ್ಲೆಯ ಸಾಧಕ ರೈತರನ್ನು ಆಹ್ವಾನಿಸಲಾಗಿದೆ. ಕೃಷಿ, ತೋಟ, ಸಾಂಪ್ರದಾಯಕತೆ, ಬಿತ್ತನೆ ಬೀಜ, ವಿಶೇಷ ತಳಿ, ನಕ್ಷತ್ರ ವನ, ನವಗ್ರಹ ವನ ಸೇರಿದಂತೆ ಹಲವು ಮಾಹಿತಿಯನ್ನೊಳಗೊಂಡ ಪ್ರದರ್ಶನವನ್ನು ಈ ಕಾರ್ಯಕ್ರಮದಲ್ಲಿ ಜೋಡಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆ, ಹಾರ ತುರಾಯಿ, ಸನ್ಮಾನಗಳಿರುವುದಿಲ್ಲ. ಸ್ಥಾನಿಕರು, ಸಂಘಟಕರು ಜನರನ್ನು ಆಹ್ವಾನಿಸುತ್ತಾರೆ. ರಸ್ತೆ- ಸಂಚಾರ ದುರ್ಗಮ ವ್ಯವಸ್ಥೆಯಾಗಿದ್ದರೂ ಇಂತಹ ಹಳ್ಳಿಮೂಲೆಯಲ್ಲೊಂದು ಐತಿಹಾಸಿಕವಾದ ಕಾರ್ಯಕ್ರಮ ಸಂಯೋಜನೆ ನಮ್ಮದಾಗಬೇಕು. ಕಾರ್ಯಕ್ರಮದ ಶ್ರೇಯಸ್ಸಿಗೆ ರೈತರು ರೈತ ಮಹಿಳೆಯರು, ಸ್ಥಾನಿಕ ಪ್ರಮುಖರು, ಸಮಿತಿಯವರು ಇಲಾಖೆಯ ಮುಖ್ಯಸ್ಥರು ಶ್ರಮಿಸಬೇಕೆಂದರು. ವಿವಿಧ ವ್ಯವಸ್ಥೆತೆಗಳ ಹೊಣೆಯನ್ನು ಗೊತ್ತುಪಡಿಸಲಾಯಿತು.
ಸಭೆಗೆ ಸೇರಿದ್ದ ಗ್ರಾಮಸ್ಥರು ರಸ್ತೆ ವ್ಯವಸ್ಥೆ, ಗುಳ್ಳಪುರ ಸೇತುವೆ ಕುಸಿದ ಹಿನ್ನೆಲೆಯಲ್ಲಿ ಹೆಚ್ಚುವರಿ ದೋಣಿ ಇಲ್ಲವೇ ಬೋಟ್ ವ್ಯವಸ್ಥೆ ಕಲ್ಪಿಸುವಂತೆ ಇಲಾಖೆಯವರು ಮುತುವರ್ಜಿವಹಿಸಬೇಕೆಂದು ಕೋರಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಾರವಾರ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ, ಉಪ ಕೃಷಿ ನಿರ್ದೇಶಕ ಶಿವಪ್ರಸಾದ, ಅಂಕೋಲ ಸಹಾಯಕ ಕೃಷಿ ನಿರ್ದೇಶಕ ಶ್ರೀಧರ ನಾಯ್ಕ್, ರಾ.ಸ್ವ.ಸಂಘದ ದತ್ತಾತ್ರಯ ಎಸ್.ಭಟ್ಟ ಶೇವ್ಕಾರ್, ಭಾರತೀಯ ಕಿಸಾನ್ ಸಂಘದ ನರಸಿಂಹ ಸಾತೊಡ್ಡಿ, ಪ್ರಮುಖರಾದ ಭಾಸ್ಕರ ಮೋತಿಗುಡ್ಡ, ನಾರಾಯಣ ಹೆಗಡೆ ಕರಿಕಲ್, ಭಾಸ್ಕರ್ ಹಿಲ್ಲೂರ್, ನಾರಾಯಣ ಹೊಸ್ಮನೆ, ವಿಶ್ವೇಶ್ವರ ಹೆಬ್ಬಾರ್, ಅಣ್ಣಯ್ಯ ಹೆಗಡೆ, ಲ್ಯಾಂಪ್ಸ್ ಸೊಸೈಟಿಯ ರಾಮನಾಥ ಸಿದ್ದಿ, ಕುಣಬಿ ಸಮಾಜದ ಗಣಪತಿ ಕುಣಬಿ, ವಿ.ಎಸ್.ಭಟ್ಟ ಕಲ್ಲೇಶ್ವರ, ಗೌರೀಶ ವೈದ್ಯ, ವೆಂಕಣ್ಣ ವೈದ್ಯ, ಗೋವಿಂದ ಹೆಗಡೆ ಅಚವೆ ಸಲಹೆ-ಸೂಚನೆ ನೀಡಿದರು. ದತ್ತಾತ್ರಯ ಹೆಗಡೆ ಕೈಗಡಿ ಸ್ವಾಗತಿಸಿ ನಿರ್ವಹಿಸಿದರು.