ಯಲ್ಲಾಪುರ: ಕಷ್ಟ ಕಾಲದಲ್ಲಿ ದೇವರ ರೂಪದಲ್ಲಿ ನಮಗೆ ಒದಗಿ ಬರುವವರು ವೈದ್ಯರು. ಕೊರೋನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ನಮಗೆ ಚಿಕಿತ್ಸೆ ನೀಡಿದ್ದಾರೆ. ಅದರಲ್ಲೂ ಸನ್ಮಾನಿತರಾದ ಡಾ. ಪ್ರಸನ್ನ ಪಾಯ್ದೆಯವರು ರಾತ್ರಿ ಹಗಲೆನ್ನದೆ ರೋಗಿಗಳ ಸೇವೆಯಲ್ಲಿ ತೊಡಗಿರುವವರು. ಇಂಥವರಿಗೆ ಸನ್ಮಾನ ಮಾಡಿ ಶ್ರೀ ನಾಗರಕಟ್ಟೆ ಗಜಾನನ ರಜತ ಮಹೋತ್ಸವ ಸಮಿತಿಯವರು ಉತ್ತಮ ಕೆಲಸ ಮಾಡಿದ್ದಾರೆ.
ಉಮ್ಮಚ್ಗಿಯ ಶ್ರೀ ನಾಗರಕಟ್ಟೆ ಗಣೇಶೋತ್ಸವ ಸಮಿತಿಯ ರಜತ ಮಹೋತ್ಸವ ಪ್ರಯುಕ್ತ ಮಂಚೀಕೇರಿಯ ಡಾ. ಪ್ರಸನ್ನ ಪಾಯ್ದೆ ಅವರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತಾ.ಪಂ. ಮಾಜಿ ಸದಸ್ಯೆ ರಾಧಾ ದತ್ತಾತ್ರೇಯ ಹೆಗಡೆ ಬೆಳಗುಂದ್ಲಿ ಹೇಳಿದರು.
ಇದಕ್ಕೂ ಮೊದಲು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಉಮ್ಮಚ್ಗಿ ಗ್ರಾ.ಪಂ. ಸದಸ್ಯರಾದ ಕುಪ್ಪಯ್ಯ ಪೂಜಾರಿ ಅವರು, ಡಾ.ಪ್ರಸನ್ನ ಪಾಯ್ದೆಯವರು ಸಜ್ಜನ ವ್ಯಕ್ತಿ. ಮಧ್ಯರಾತ್ರಿ ಸಮಯದಲ್ಲಿ ಸೀರ್ಯಸ್ಸಾದ ರೋಗಿಗಳನ್ನು ಕರೆದುಕೊಂಡು ಹೋದರೂ ಎದ್ದು ಬಂದು ಚಿಕಿತ್ಸೆ ನೀಡುತ್ತಾರೆ. ಬಹಳ ಸಲ ಅದನ್ನು ನಾನು ನೋಡಿದ್ದೇನೆ. ಇಂಥ ಒಳ್ಳೆಯ ವೈದ್ಯರಿರುವುದರಿಂದಲೇ ಈ ಭಾಗದ ಬಹಳ ಕುಟುಂಬಗಳು ಆರೋಗ್ಯದಿಂದ ಇರಲು ಸಾಧ್ಯವಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತಾನಾಡಿದ ಡಾ.ಪ್ರಸನ್ನ ಪಾಯ್ದೆಯವರು, ಉಮ್ಮಚ್ಗಿಯ ಜನ ಸುಸಂಸ್ಕೃತರು. ಇಲ್ಲಿಗೆ ಒಳ್ಳೆಯ ಕೆಲಸಗಳನ್ನು ತರಲು ಮುಂದಿರುತ್ತಾರೆ. ಇಂಥವರಿಂದ ಸನ್ಮಾನಿಸಿಕೊಳ್ಳಲು ಖುಷಿಯಾಯಿತು. ಇದು ನನ್ನ ಜವಾಬ್ದಾರಿ ಇನ್ನೂ ಹೆಚ್ಚಾಗುವಂತೆ ಮಾಡಿದೆ ಎಂದು ಹೇಳಿದರು.
ಉಮ್ಮಚ್ಗಿ ಗ್ರಾ.ಪಂ. ಸದಸ್ಯರಾದ ಗ.ರಾ. ಭಟ್ಟ,ಖೈತಾನ್ ಡಿಸೋಜ ಮೊದಲಾದವರು ಮಾತನಾಡಿದರು. ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯರುಗಳಾದ ತಿಮ್ಮವ್ವ ಬಸಾಪೂರ, ಲಲಿತಾ ವಾಲೀಕಾರ್, ಊರ ಹಿರಿಯರಾದ ನಾಗಾ ವೆಂಕ್ಟಾ ದೇವಾಡಿಗ ಮೊದಲಾದವರಿದ್ದರು. ಸ್ವಾಗತಿಸಿ, ನಿರ್ವಹಿಸಿ, ವಂದನಾರ್ಪಣೆಯನ್ನು ಜಾಪರ್ ಶೇಖ್ ಮಾಡಿದರು.