ಮುಂಡಗೋಡ: ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಸೋಮವಾರ ಮುಂಡಗೋಡ ಅರಣ್ಯ ಇಲಾಖೆಯ ಕಛೇರಿಯ ಆವರಣದಲ್ಲಿ ‘ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್’ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಎಸಿಎಫ್ ಎಸ್‍ಎಮ್ ವಾಲಿ, ಆರ್‍ಎಫ್‍ಒಗಳಾದ ಸುರೇಶ ಕುಳ್ಳೊಳ್ಳಿ ಮತ್ತು ಅಜಯ್ ನಾಯ್ಕ ಅವರ ಸಮಕ್ಷಮದಲ್ಲಿ ನಡೆಯಿತು.
ಅರಣ್ಯವಾಸಿಗಳ ಸಮಸ್ಯೆಗಳಿಗೆ ಸಮರ್ಪಕ ಸ್ಪಂದನೆ ತೋರಿಸದ ಸ್ಥಳೀಯ ಅಧಿಕಾರಿಗಳೊಂದಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅರಣ್ಯ ಇಲಾಖೆಯ ವಿರುದ್ಧ ಅತಿಕ್ರಮಣ ಹೋರಾಟಗಾರರು ತೀವ್ರ ವಾಗ್ವಾದಕ್ಕೆ ಇಳಿದು ಧರಣಿ ನಡೆಸಿದ ಘಟನೆ ಅರಣ್ಯ ಇಲಾಖೆಯ ಆವರಣದಲ್ಲಿ ನಡೆಯಿತು.
ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯಿಂದ ಅಸಮರ್ಪಕ ಕಾರ್ಯ, ಅರಣ್ಯವಾಸಿಗಳಿಗೆ ಕಿರುಕುಳ, ವನ್ಯಜೀವಿಗಳಿಂದ ಬೆಳೆ ನಷ್ಟ, ಬೆಳೆ ನಷ್ಟಕ್ಕೆ ಪರಿಹಾರ ನೀಡದಿರುವುದು, ಅಸಮರ್ಪಕ ಜಿಪಿಎಸ್ ಕಾರ್ಯ, ಪೊಲೀಸ್ ಇಲಾಖೆ ಮೂಲಕ ಅರಣ್ಯವಾಸಿಗಳಿಗೆ ದೌರ್ಜನ್ಯ, ಅರಣ್ಯ ಇಲಾಖೆಯಿಂದ ಅರಣ್ಯವಾಸಿಗಳ ಮೇಲೆ ಹಲ್ಲೆಯು ಮುಂತಾದ ಸಮಸ್ಯೆಗಳನ್ನು ಈ ಅದಾಲತ್‍ಗಳಲ್ಲಿ ತಾಲೂಕಿನ ಅರಣ್ಯವಾಸಿಗಳು ತಮ್ಮ ಸಮಸ್ಯೆಗಳ ಸುರಿಮಳೆಯೇ ಸುರಿಸಿದರು.
ಹೋರಾಟಗಾರರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಮೇಲಾಧಿಕಾರಿಗಳೇ ಬಂದು ಉತ್ತರಿಸಬೇಕು. ಇದರ ಬಗ್ಗೆ ಒಂದು ವಾರದ ಹಿಂದೆಯೇ ಲಿಖಿತವಾಗಿ ತಿಳಿಸಲಾಗಿತ್ತು. ಆದರೂ ಮೇಲಾಧಿಕಾರಿಗಳು ಬಾರದೇ ಇರುವುದಕ್ಕೆ ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಮತ್ತು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿ ಕೆಲ ಸಮಯ ಇಲಾಖೆಯ ಆವರಣದಲ್ಲಿ ಪ್ರತಿಭಟನೆ ನಡೆಸಿ ಕಛೇರಿ ಒಳಗೆ ನುಗ್ಗುವ ಎಚ್ಚರಿಕೆ ನೀಡುತ್ತಿದ್ದಂತೆ. ಆರೋಗ್ಯ ಸರಿ ಇಲದೆ ರಜೆಯಲ್ಲಿದ್ದ ಎಸಿಎಫ್ ಎಸ್.ಎಮ್ ವಾಲಿ ಅವರು ಸ್ಥಳಕ್ಕೆ ಬಂದು ಹೋರಾಟಗಾರರ ಸಮಸ್ಯೆ ಆಲಿಸಿದರು.
ಅರಣ್ಯವಾಸಿಗಳ ಸಮಸ್ಯೆಗಳಿಗೆ ಅರಣ್ಯಾಧಿಕಾರಿಗಳು ಉತ್ತರಿಸಲಾಗದೇ, ನೀಡಿದ ಉತ್ತರವೂ ಸಮರ್ಪಕವಿಲ್ಲದೇ, ಅರಣ್ಯವಾಸಿಗಳ ಪ್ರಶ್ನೆಗಳ ಮೇಲೆ ಪ್ರಶ್ನೆಗಳಿಗೆ ಅರಣ್ಯಾಧಿಕಾರಿಗಳು ತತ್ತರಿಸಿದ್ದು ವಿಶೇಷವಾಗಿತ್ತು. ಅರಣ್ಯವಾಸಿಗಳ ಬೇಡಿಕೆಗಳನ್ನು ಬಗೆಹರಿಸಲು ಒಂದು ತಿಂಗಳ ಕಾಲಾವಕಾಶ ನೀಡಿದ್ದು ಈ ಅವಧಿಯಲ್ಲಿ ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂದಿನ ತಿಂಗಳು ತೀವ್ರ ತರಹದ ಹೋರಾಟ ನಡೆಸಲು ತೀರ್ಮಾನಿಸಿದರು.
ಅದಾಲತ್‍ನಲ್ಲಿ ತಾಲೂಕ ಅಧ್ಯಕ್ಷ ಶಿವಾನಂದ ಜೋಗಿ, ಶಬ್ಬೀರ್ ಚಪಾತಿ, ವೀರಭದ್ರ ಗುಳಗಿ, ಸೋಮಸಿಂಗ ಸಿಗ್ಗಟ್ಟಿ, ಬಾಬಣ್ಣ ಆನ್ವೇಕರ್ ನಾರಾಯಣ, ಶಿವಣ್ಣ, ಗೊದು ಗೌಳಿ, ಠಿಕ್ರು ಗೌಳಿ, ಮಾಬುಬಸಾಬ ಮಿಶ್ರಿಕೋಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.