ಮುಂಡಗೋಡ: ತಾಲೂಕಾ ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಸೋಮವಾರ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರವು ಮೂರು ರೈತ ವಿರೋಧಿ ಕೃಷಿ ಕಾಯ್ದೆಯನ್ನು ಜಾರಿಗೆ ತರುತ್ತಿದೆ. ಈ ಕೃಷಿ ಕಾಯ್ದೆಯನ್ನು ಜಾರಿಗೆ ತರಬೇಡಿ ಎಂದು ಎಂಟು ತಿಂಗಳುಗಳಿಂದ ಸಾವಿರಾರು ರೈತರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ನೂರಾರು ರೈತರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇವರಿಗೆ ದೇಶದ ರೈತರ ಹಿತಕ್ಕಿಂತ ಕಾಯ್ದೆಯನ್ನು ಜಾರಿ ಮಾಡುವುದೇ ಸಾಧನೆ ಎಂದುಕೊಂಡಿದ್ದಾರೆ. ಇವರು ರೈತರನ್ನು ಉದ್ಧಾರ ಮಾಡವುದು ಬದಲಿಗೆ ರೈತರ ಬೆನ್ನೆಲುಬನ್ನ ಮುರಿಯಲು ಹೊರಟಿದ್ದಾರೆ. ಆದ್ದರಿಂದ ರೈತರ ಸಿಟ್ಟು ನೆತ್ತಿಗೆರುವುದಕ್ಕಿಂತ ಮುಂಚೆ ಈ ರೈತ ವಿರೋಧಿ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕು.
ಜನವಿರೋಧಿ ನೀತಿಯಿಂದಾಗಿ ಇಂದು ಪೆಟ್ರೋಲ್ ಡೀಸೆಲ್ ಮತ್ತು ಗ್ಯಾಸ್‍ನ್ನು ಹೆಚ್ಚಿಸಿ ಬಡವರ ಬದಕನ್ನು ಬೀದಿಪಾಲು ಮಾಡುತ್ತಿರುವ ಸರ್ಕಾರಕ್ಕೆ ಈ ದೇಶದ ಮಹಿಳೆಯರ ಶಾಪ ತಟ್ಟದೇ ಇರದು. ಬಡವರು ಅನುಭವಿಸುತ್ತಿರುವ ಕಷ್ಟ ನೋವುಗಳನ್ನು ಕೇಳಬೇಕಾದ ಕೇಂದ್ರ ಸರ್ಕಾರವು ಎಷ್ಟೇ ಹೋರಾಟ, ಪ್ರತಿಭಟನೆ ಮಾಡಿದರೂ ಕ್ಯಾರೆ ಅನ್ನದೇ ಉದ್ದೇಶ ಪೂರ್ವಕವಾಗಿಯೇ ಗ್ಯಾಸ್ ಪೆಟ್ರೋಲ್, ಡೀಸೆಲನ್ನು ಏರಿಕೆ ಮಾಡುತ್ತಿದ್ದು ಮಹಿಳೆಯರೇ ಪ್ರತಿಭಟನೆ ಮಾಡುವಂತಹ ಸ್ಥಿತಿ ನಿರ್ಮಾಣ ಮಾಡಿದೆ.
ಎಪ್ಪತ್ತು ವರ್ಷದಿಂದ ಕಾಂಗ್ರೆಸ್ ಕಟ್ಟಿದ ದೇಶವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದೆ. ಈ ಆರು ಲಕ್ಷ ಕೋಟಿ ರೂಪಾಯಿಗಳ ಆಸ್ತಿಯನ್ನು ಮಾರಾಟ ಮಾಡುತ್ತಿದೆ. ಈ ದೇಶದ ಆಸ್ತಿಯನ್ನು ದೇಶದ ಉಳಿಸಿ ಬೆಳೆಸಿಕೊಂಡು ಹೊಗಬೇಕಾದ ಕೇಂದ್ರದ ಬಿಜೆಪಿ ಸರ್ಕಾರವು ಕೆಟ್ಟ ಆರ್ಥಿಕ ಸ್ಥಿತಿಯಿಂದಾಗಿ ದೇಶದ ಆಸ್ತಿಯನ್ನು ಮಾರಾಟ ಮಾಡುತ್ತಿದೆ. ಇದನ್ನು ಪ್ರಶ್ನೆ ಮಾಡಿದರೆ, ಖಾಸಗೀಕರಣ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದಂತಾಗಿದೆ. ಕೂಲಿಕಾರರಿಗೆ ಕೆಲಸ ವಿಲ್ಲದಂತಾಗಿದೆ. ಕೊಟ್ಯಾಂತರ ಉದ್ಯೋಗಿಗಳು ಕೆಲಸ ಕಳೆದು ಕೊಂಡಿದ್ದಾರೆ. ನಿರುದ್ಯೋಗಿ ಪ್ರಮಾಣ ಹೆಚ್ಚಾಗಿದೆ. ದೇಶದ ರಾಷ್ಟ್ರಪತಿಗಳಾದ ತಾವು ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯುವುದರ ಜೊತೆಗೆ ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತ ಮಾಡಲು ಕೂಡಲೇ ಮಧ್ಯ ಪ್ರವೇಶಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿ ಸಾರ್ವಜನಿಕರು ಬದುಕಲು ಅವಕಾಶ ಮಾಡಿಕೊಡಬೇಕೆಂದು ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಭಾರತಿ ಗೌಡ್ರು, ಶಾರದಾಬಾಯಿ ರಾಠೋಡ, ಧರ್ಮರಾಜ ನಡಗೇರ, ಅಲಿಹಸನ್ ಬೆಂಡಿಗೇರಿ, ಮಲ್ಲಿಕಾರ್ಜುನ್ ಗೌಳಿ, ಜೈನು ಬೆಂಡಿಗೇರಿ, ಅಲ್ಲಾಉದ್ದೀನ್ ಕಮಡೊಳ್ಳಿ, ಪ್ರಶಾಂತ್ ಭದ್ರಾಪುರ ಹಾಗೂ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.