• first
  second
  third
  previous arrow
  next arrow
 • ಬಿಲ್ ಪಾವತಿ ನೆಪದಲ್ಲಿ ಹಣ ಪಡೆದು ಮೋಸ; ಆಶ್ರಯ ಯೋಜನೆ ಫಲಾನುಭವಿಗಳ ಆರೋಪ

  300x250 AD

  ಮುಂಡಗೋಡ: ಪಟ್ಟಣದ ಲಮಾಣಿ ತಾಂಡಾದ ಆಶ್ರಯ ಯೋಜನೆ ಫಲಾನುಭವಿಗಳು ಆಶ್ರಯ ಯೋಜನೆ ವಿಷಯ ನಿರ್ವಾಹಕಿ ಮಂಚಲಾ ಶೇಟ್ ಅವರು ಬಿಲ್ ಪಾವತಿ ಮಾಡುವುದಾಗಿ ಹೇಳಿ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಪ.ಪಂ.ಮುಖ್ಯಾಧಿಕಾರಿ ಸಂಗನಬಸಯ್ಯ ಅವರ ಮುಂದೆ ಸೋಮವಾರ ಆರೋಪಿಸಿದರು.


  ಎಲ್ಲಿ ನಮ್ಮ ಬಿಲ್ ಪಾವತಿಯಾಗುವುದಿಲ್ಲವೊ ಎಂದು ಹೆದರಿ 5000ರೂ. 2000ರೂ. 3000ರೂ. ಹೀಗೆ ನಿಜವಾಗಿಯೂ ದುಡ್ಡು ಕೊಟ್ಟಿದ್ದೇವೆ. ಒಬ್ಬ ಮಹಿಳೆ ಬಿಲ್‍ಗಾಗಿ ಪ.ಪಂ.ಗೆ ಓಡಾಡಿ ಕಾಲು ಮುರಿದು ಮನೆಯಲ್ಲಿಯೇ ಹಾಸಿಗೆ ಹಿಡಿದ್ದಾಳೆ. ಬಡ್ಡಿಯಿಂದ ದುಡ್ಡು ತಂದು ಮನೆ ಕಟ್ಟಿದ್ದೇವೆ. ಬಿಲ್ ಆಗಲು ಇಷ್ಟು ತಡವೇಕೆ ಎಂದು ಕೇಳಿದಾಗ ಮೇಲಿಂದ ಇನ್ನೂ ಬಂದಿಲ್ಲ ನಾನೇನು ಮಾಡಲಿ ಎನ್ನುತ್ತಾರೆ.
  ಪಕ್ಕದ ಓಣಿಯ ಮನೆಗಳ ಜಿಪಿಎಸ್ ಮಾಡಿಕೊಂಡು ನಮ್ಮ ಓಣಿಯ ಜಿಪಿಎಸ್ ಮಾಡದೇ ಹಾಗೆಯೇ ಹೋಗುವಾಗ ಇವರನ್ನು ಕೇಳಿದರೆ ಅದೆಲ್ಲಾ ನಿಮಗೇಕೆ ಅವೆಲ್ಲ ಕಾನೂನುಗಳನ್ನು ನಿಮಗೆ ಹೇಳಲು ಆಗುವುದಿಲ್ಲ ಎನ್ನುತ್ತಾರೆ. ಏನಾದರೂ ಹೇಳಿದರೆ ನಮಗೆ ಬರುವ ಒಂದೂವರೆ ಲಕ್ಷ ರೂ. ಸಿಗುವುದಿಲ್ಲ ಎಂದು ಹೆದರಿ ಹೇಳದೆ ಸುಮ್ಮನಿದ್ದೇವೆ.

  ನಮ್ಮ ಹತ್ತಿರ ದುಡ್ಡು ಪಡೆದ ಬಗ್ಗೆ ಕೇಳಿದಾಗ ನಾನು ದುಡ್ಡು ಪಡೆದೇ ಇಲ್ಲ ಎನ್ನುತ್ತಾರೆ ಎಂದಾಗ ಮುಖ್ಯಾಧಿಕಾರಿ ಇದೆಲ್ಲ ನನ್ನ ಗಮನಕ್ಕೆ ಬಂದಿಲ್ಲ. ದುಡ್ಡು ಕೊಡುವಾಗ ನನ್ನನ್ನು ಕೇಳಿ ಕೊಟ್ಟಿಲ್ಲ. ನೀವು ಹಾಗೆಲ್ಲ ಕೊಡಬಾರದು ಎಂದಾಗ ಮಂಚಲಾ ಶೇಟ್ ಮುಖ್ಯಾಧಿಕಾರಿಗೆ ನೀವೂ ಅವರು ಹೇಳಿದಂತೆ ನಂಬುತ್ತಿದ್ದೀರಿ ಎಂದರು. ಮಾಡುವುದೆಲ್ಲಾ ಮಾಡಿದ್ದೀರಿ ಸುಮ್ಮನಿರಿ ಎಂದು ಮುಖ್ಯಾಧಿಕಾರಿ ಅವರಿಗೆ ಜೋರು ಮಾಡಿದರು. ಈ ನಡುವೆ ಮಾತನಾಡಿದ ವಾರ್ಡ್ ಸದಸ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಲಮಾಣಿ ಮಂಚಲಾ ಅವರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅವರಿಗೆ ಮಾತನಾಡುವ ರೀತಿಯೇ ಗೊತ್ತಿಲ್ಲ. ಬಿಲ್ ಬಾರದೆ ಹೋದರೆ ನಾನೇನು ಮಾಡಬೇಕು ಕಾರವಾರಕ್ಕೆ ಹೋಗಿ ಅಥವಾ ಯಲ್ಲಾಪುರಕ್ಕೆ ಹೋಗಿ ಎನ್ನುತ್ತಾರೆ. ಈ ಸಮಸ್ಯೆ ಬಗ್ಗೆ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದರು.

  300x250 AD


  ಮುಖ್ಯಾಧಿಕಾರಿ ಸಂಗನಬಸಯ್ಯ ಮಾತನಾಡಿ, ಆಶ್ರಯ ಯೋಜನೆಯಡಿ ರಾಜ್ಯದ ಅನುದಾನ ಬಂದಿದ್ದು ಕೇಂದ್ರದ ಅನುದಾನ ಬಂದಿಲ್ಲ. ವಿಶೇಷ ಅನುದಾನವಾಗಿದ್ದರಿಂದ ತಡವಾಗಿದೆ. ಇಡಿ ರಾಜ್ಯದ ಸಮಸ್ಯೆ ಆಗಿದೆ. ಅಧಿವೇಶನದಲ್ಲಿಯೂ ಈ ಕುರಿತು ಚರ್ಚೆಯಾಗುತ್ತಿದೆ. ಈಗಾಗಲೆ 60 ಕೋಟಿ ರೂ. ಅನುದಾನ ಬಂದಿದ್ದು ವಿಭಾಗ ಮಾಡಿ ಮಾಡುತ್ತಿದ್ದಾರೆ. ಮುಂಡಗೋಡ ಮತ್ತು ಯಲ್ಲಾಪುರಕ್ಕೆ ಹೆಚ್ಚು ಅನುದಾನ ನೀಡುವಂತೆ ಸಚಿವರೊಂದಿಗೆ ಪ್ರಸ್ತಾಪ ಮಾಡಿದ್ದೇನೆ. ಪಟ್ಟಣದ 96 ಮಂದಿ ಫಲಾನುಭವಿಗಳ ಯಾದಿಯನ್ನೂ ನೀಡಲಾಗಿದೆ. 2019ರಲ್ಲಿ ನೆರೆ ಹಾವಳಿ ಆದ ಕಾರಣ ರಾಜೀವ ಗಾಂಧಿ ಅನುದಾನವನ್ನು ಮಳೆ ಹಾನಿ ಪರಿಹಾರಕ್ಕೆ ಬದಲಾಯಿಸಲಾಯಿತು. ನಂತರ ಚುನಾವಣೆ ಬಂದು ತಡವಾಯಿತು. ಯಾರೂ ಧೈರ್ಯಗೆಡಬೇಡಿರಿ. ಇನ್ನು ಒಂದು ತಿಂಗಳಲ್ಲಿ ಬಿಲ್ ಪಾವತಿ ಮಾಡಲಾಗುವುದು ಎಂದು ಹೇಳಿ ಫಲಾನುಭವಿಗಳಿಗೆ ಸಮಾಧಾನಪಡಿಸಿ ಕಳುಹಿಸಿದರು.


  ಪೋಮಣ್ಣ ಲಮಾಣಿ, ರಾಜು ಲಮಾಣಿ, ಪರಶುರಾಮ ಲಮಾಣಿ, ಮಂಜುನಾಥ ಲಮಾಣಿ, ತಿಪ್ಪವ್ವ ವಡ್ಡರ, ಮಂಜುನಾಥ ಲಮಾಣಿ, ಪ್ರಕಾಶ ಲಮಾಣಿ, ಪಾಲಾಕ್ಷ ಲಮಾಣಿ, ರಾಘವೇಂದ್ರ ಲಮಾಣಿ, ಸುಶೀಲಾ ಲಮಾಣಿ, ಪ್ರೇಮಾ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top