ಮುಂಡಗೋಡ: ಜಿಂಕೆಯನ್ನು ಕೊಂದು ಮಾಂಸವನ್ನು ತರುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಇನ್ನಿಬ್ಬರು ಆರೋಪಿಗಳು ಪರಾರಿಯಾದ ಘಟನೆ ತಾಲೂಕಿನ ಸನವಳ್ಳಿ ಅರಣ್ಯದಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ.
ಸನವಳ್ಳಿ ಗ್ರಾಮದ ಕಾನು ಶಳಕೆ, ಸುರೇಶ ಹನಮಣ್ಣವರ ಬಂಧಿತ ಆರೋಪಿಗಳು. ಫಕೀರೇಶ ಕೆರಿಹೊಲದವರ ಹಾಗೂ ಇನ್ನೊಬ್ಬ ಆರೋಪಿ ನಾಪತ್ತೆಯಾಗಿದ್ದಾರೆ. ಈ ನಾಲ್ವರು ಆರೋಪಿಗಳು ಸನವಳ್ಳಿ ಅರಣ್ಯದಲ್ಲಿ ಬೇಟೆಯಾಡಲು ಹೋಗಿದ್ದರು. ಜಿಂಕೆಯನ್ನು ಬೇಟೆಯಾಡಿ ಅರಣ್ಯದಲ್ಲಿಯೆ ಜಿಂಕೆಯ ತಲೆ ಹಾಗೂ ಚರ್ಮವನ್ನು ಬೇರೆ-ಬೇರೆ ಮಾಡಿ ಕಾಡಿನಿಂದ ಜಿಂಕೆ ಮಾಂಸವನ್ನು ತರುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ 20ಕೆ.ಜಿ. ಮಾಂಸ, ಜಿಂಕೆಯ ತಲೆ, ಒಂದು ಬಂದೂಕು ವಶಕ್ಕೆ ಪಡೆದಿದ್ದಾರೆ. ಉಳಿದ ಇಬ್ಬರು ಆರೋಪಿಗಳ ಶೋಧ ಕಾರ್ಯ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.
ನಾಡ ಬಂದೂಕಿನಿಂದ ಜಿಂಕೆ ಕೊಂದು, ಇಬ್ಬರು ಆರೋಪಿಗಳು ಅರಣ್ಯ ಸಿಬ್ಬಂದಿಗೆ ಕೈಗೆ ಸಿಕ್ಕಿಬಿದ್ದು, ಇನ್ನಿಬ್ಬರು ಆರೋಪಿಗಳು ಕತ್ತಲಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇಲಿವಾರ ಮಾಡಲು, ಕಾಡಿನೊಳಗೆ ಹೋದ ನಾಲ್ವರು ಆರೋಪಿಗಳು ಜಿಂಕೆಯನ್ನು ಬೇಟೆಯಾಡಿದ್ದಾರೆ. ಆದರೆ ಈ ಬಗ್ಗೆ ಅರಣ್ಯ ಸಿಬ್ಬಂದಿ ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ. ಮೂಕಪ್ರಾಣಿ ಜಿಂಕೆಗೆ ನ್ಯಾಯ ಸಿಗಬಹುದಾ ಎಂದು ಪ್ರಾಣಿಪ್ರಿಯರು ಮಾತನಾಡಿಕೊಳ್ಳುತ್ತಿರುವುದು ತಾಲೂಕಿನಾದ್ಯಂತ ಸುದ್ದಿಯಾಗಿದೆ.