ಮುಂಡಗೋಡ: ರಾಷ್ಟ್ರೀಯ ಹೆದ್ದಾರಿಗೆ ಒಳಪಡುವ ಯಲ್ಲಾಪುರ-ಬಂಕಾಪುರ ರಸ್ತೆ ವಿಸ್ತರಿಸಿ ಅಭಿವೃದ್ಧಿ ಪಡಿಸುವುದರ ಕುರಿತು ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷ ಮಂಜುನಾಥ ಎಚ್. ಕಲಾಲ ಅವರು ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಕೈಗಾ-ಇಳಕಲ್ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಯಲ್ಲಾಪುರ-ಬಂಕಾಪುರ ರಸ್ತೆ ಅತಿ ಚಿಕ್ಕ -ಇಕ್ಕಟ್ಟಾದ ರಸ್ತೆ, ಯಲ್ಲಾಪುರದಿಂದ ಬಂಕಾಪುರ ಗಡಿಯವರೆಗೆ ಒಳಪಡುತ್ತದೆ. ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಒಳಪಟ್ಟು ವಾಹನ ಸಂಚಾರ ಹೆಚ್ಚಾಗಿರುತ್ತದೆ. ಈ ರಸ್ತೆ ಜಿಲ್ಲಾ ಕೇಂದ್ರ ಕಾರವಾರದ ಸಂಪರ್ಕ ರಸ್ತೆ ಯಾಗಿದ್ದು ಹಾಗೆಯೇ ನೆರೆಯ ಗೋವಾ ರಾಜ್ಯಕ್ಕೆ ಕೂಡುವ ರಸ್ತೆಯಾಗಿರುತ್ತದೆ. ರಾತ್ರಿ ಸಮಯದಲ್ಲಿ ವಾಹನ ಸವಾರರ ಪರದಾಟ ಕೇಳತೀರದು, ಮಳೆಗಾಲದಲ್ಲಿಯೂ ಪರಿಸ್ಥಿತಿ ತೀರಾ ಗಂಭೀರವಾಗಿರುತ್ತದೆ.
ಈ ರಸ್ತೆಯಲ್ಲಿ ಇಕ್ಕಟ್ಟಾದ ತಿರುವುಗಳಿಂದ ಕೂಡಿದ್ದು ಏಕಕಾಲಕ್ಕೆ ಎರಡು ವಾಹನಗಳು ಸಂಚರಿಸಲು ಕಷ್ಟ ಸಾಧ್ಯ ಹಾಗೂ ಈ ರಸ್ತೆಯು ಏಕ ಮುಖ ಸಂಚಾರಕ್ಕೆ ಯೋಗ್ಯವಾಗಿದ್ದು ದ್ವಿಮುಖ ಸಂಚಾರಕ್ಕೆ ಅಲ್ಲ. ಕಾರಣ ಪ್ರಸ್ತುತ ರಸ್ತೆಯ ಇಕ್ಕಲಗಳ ಬಲ ಮತ್ತು ಎಡ ಭಾಗಗಳಲ್ಲಿ ಎರಡು ಅಡಿಗಳಷ್ಟು ವಿಸ್ತರಿಸಿ ಅಭಿವೃದ್ಧಿ ಪಡಿಸಿದ್ದಲ್ಲಿ ರಸ್ತೆಯಲ್ಲಿ ಸಂಚರಿಸಲು ಸುಗಮವಾಗುತ್ತದೆ. ಆದ್ದರಿಂದ ತಾವುಗಳು ಈ ಮನವಿಯನ್ನು ಪರಿಗಣಿಸಿ ಸದರಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.