ಕುಮಟಾ: ಗಣೇಶೋತ್ಸವ ಅಂಗವಾಗಿ ನಗರದ ಅನೇಕ ಕಡೆ ತೆರಳಿದ ಶಾಸಕ ದಿನಕರ ಶೆಟ್ಟಿ ಗಣೇಶನ ದರ್ಶನ ಪಡೆದರು.
ಗಣೇಶನ ಹಬ್ಬದ ದಿನ ಕುಮಟಾದ ಡಯಟ್ ಕಾಲೇಜಿಗೆ ತೆರಳಿದ ಶಾಸಕ ದಿನಕರ ಶೆಟ್ಟಿ ಕಾಲೇಜಿನಲ್ಲಿ ಪ್ರತಿಷ್ಠಾಪಿಸಿದ ಗಣೇಶನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು ಕಾಲೇಜಿನ ಪ್ರಾಂಶುಪಾಲ ಈಶ್ವರ ನಾಯ್ಕ ಶಾಸಕರನ್ನು ಶಾಲು ಹೊದೆಸಿ ಗೌರವಿಸಿದರು. ನಂತರ ಚಿತ್ರಗಿ ಹಳ್ಕಾರ ಕ್ರಾಸ್ ನ ಪಕ್ಷದ ಕಾರ್ಯಕರ್ತ ರಾಮದಾಸ ಹರಿಕಾಂತರವರ ಮನೆಗೆ ತೆರಳಿ ದರ್ಶನ ಪಡೆದರು. ಚಿತ್ರಗಿ ಕ್ರಾಸ್ ನಲ್ಲಿ ಪ್ರತಿಷ್ಠಾಪಿಸಿದ ಸಾರ್ವಜನಿಕ ಗಣೇಶೋತ್ಸವದಲ್ಲಿ ಪಾಲ್ಗೊಂಡರು. ನಂತರ ಮಾತನಾಡಿದ ಶಾಸಕರು” ಸರ್ಕಾರದ ಮಾರ್ಗಸೂಚಿ ದಯವಿಟ್ಟು ಸಾರ್ವಜನಿಕರು ಅನುಸರಿಸಿ ಸಂತೋಷದಿಂದ ಹಬ್ಬ ಆಚರಿಸಿ. ಮಾಸ್ಕ್ ಧರಿಸಿ ಸೆನಿಟೈಸರ್ ಬಳಸಿ ಅಂತರ ಕಾಯ್ದುಕೊಂಡು ಎಚ್ಚರ ವಹಿಸಿ. ಸಂಕಷ್ಟ ಹರ ಗಣಪತಿಯು ಈ ಕೋವಿಡ್ ವೈರಸ್ ನಿರ್ಮೂಲನೆ ಮಾಡಿ ಕರೋನಾದಿಂದ ನಮ್ಮ ದೇಶ ಮುಕ್ತವಾಗಿ ಎಲ್ಲ ಜನರು ಮತ್ತೆ ತಮ್ಮ ತಮ್ಮ ಕೆಲಸದಲ್ಲಿ ಅಭಿವೃದ್ಧಿಗೊಂಡು ನಾಡಿನಲ್ಲಿ ಸುಭಿಕ್ಷೆ ನೆಲೆಸುವಂತಾಗಲಿ ಎಂದು ಎಲ್ಲರಿಗೂ ಹಬ್ಬದ ಶುಭಾಶಯ ತಿಳಿಸಿದರು.
ಈ ಸಂದರ್ಭದಲ್ಲಿ ಹೆಗಡೆ ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜುನಾಥ ಪಟಗಾರ, ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೊಷ್ಠ ಪ್ರಮುಖ ನವೀನ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು