ಶಿರಸಿ: ಭಾರತೀಯ ಕಲೆ ಮತ್ತು ಸಂಸ್ಕೃತಿಗಳು ಇನ್ನುಳಿದ ಪಾಶ್ಚಿಮಾತ್ಯ ಕಲೆಗಳಿಗಿಂತ ಅತ್ಯಂತ ಶ್ರೇಷ್ಠವಾಗಿವೆ. ಇಲ್ಲಿಯ ಕಲೆಗಳಲ್ಲಿ ನವರಸ ತುಂಬಿಕೊಂಡಿದ್ದು, ಅದರಲ್ಲೂ ಯಕ್ಷಗಾನ ಕಲೆ ಕಲಾಪ್ರಕಾರದ ಎಲ್ಲ ವೈಶಿಷ್ಟ್ಯತೆಯನ್ನು ಹೊಂದಿದ್ದು, ಕಲೆಗಳಲ್ಲಿಯೇ ಶ್ರೇಷ್ಠವಾಗಿದೆ ಎಂದು ಮೇಲುಕೋಟೆ ನಿವೃತ್ತ ಪ್ರಾಚಾರ್ಯ ಹಾಗೂ ಪ್ರಸಿದ್ಧ ಅರ್ಥಧಾರಿ ವಿ. ಉಮಾಕಾಂತ ಭಟ್ಟ ಕೆರೇಕೈ ಹೇಳಿದರು.
ನಗರದ ಟಿ.ಎಂ.ಎಸ್. ಸಭಾಂಗಣದಲ್ಲಿ ಶುಕ್ರವಾರ ಸಂಘಟಿಸಿದ್ದ ಉಡುಪಿ ಜಿಲ್ಲೆ ಸಿದ್ದಾಪುರದ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನದ ಲಾಂಛನ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಯಕ್ಷಗಾನ ಶಿಕ್ಷಣ ಅಭ್ಯಾಸ ಎನ್ನುವುದು ವ್ಯಕ್ತಿಗತವಾದ ಜೀವನದಲ್ಲಿ ಭಾಷೆ, ನಿಯತ್ತು ಕಲಿಸುತ್ತದೆ. ಇದರೊಂದಿಗೆ ಕಾಣುವ ಕಲೆಯೆಂಬ ದೀಪ ಬೆಳಗಿಸಿ ಲೋಕಕ್ಕೆ ಪರಿಚಯಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಭವಿಷ್ಯದ ಕಾರ್ಯಕ್ರಮಗಳ ಯಶಸ್ವಿ ಕಾರ್ಯದ ಸಂಕೇತವನ್ನು ಲೋಕಾರ್ಪಣೆ ಗೊಳಿಸುವುದೇ ಲಾಂಛನ ಬಿಡುಗಡೆಯಾಗಿದ್ದು, ಕನಸನ್ನು ನನಸಾಗಿಸುವುದು ಸುಲಭವಲ್ಲ. ಬದಲಾಗಿ ಶ್ರಮ, ಪ್ರಾಮಾಣಿಕ ನಿಷ್ಠೆಗಳು ಕೂಡಿದಾಗ ಯಶಸ್ಸು ಸಾಧ್ಯ ಎಂದರು.
ಪ್ರತಿಷ್ಠಾನದ ಲಾಂಛನ ಬಿಡುಗಡೆ ಮಾಡಿದ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಮಾತನಾಡಿ, ಕಾಲ ಬದಲಾದಂತೆ ಒಂದು ಹಂತದಲ್ಲಿ ಕಲೆಯನ್ನೂ ಬದಲಾಯಿಸುತ್ತಾರೆ. ಹಳೆಯ ಕಲಾ ಪ್ರಕಾರಗಳನ್ನು ಉಳಿಸಿ, ಹೊಸ ರೂಪ ಕೊಡುವಲ್ಲಿ ಕಲಾವಿದ ಪಾತ್ರ ಮುಖ್ಯವಾಗಿದೆ. ಪ್ರತಿಯೊಂದು ಕಲೆಯ ಉಳಿವಿನ ಬಗ್ಗೆ ಸಮಾಜ ಕಾರ್ಯೋನ್ಮುಖವಾಗಬೇಕಿದೆ. ಪ್ರತಿಷ್ಠಾನದ ಮುಂದಿನ ನಡೆಗಳು ಇದಕ್ಕೆ ಪೂರಕವಾಗಿರಲಿ ಎಂದರು.
ಸಾಲಿಗ್ರಾಮ ಮೇಳದ ಪ್ರಧಾನ ಭಾಗವತ ಹಿಲ್ಲೂರು ರಾಮಕೃಷ್ಣ ಹೆಗಡೆ ಮಾತನಾಡಿ, ಪ್ರತಿಯೊಂದು ಕಲಾವಿದನಿಗೂ ಅವನಲ್ಲಿರುವ ಕಲೆಯೆಡೆಗೆ ಗೌರವ ಇರಬೇಕು. ಆ ಕುರಿತು ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಕಲಾ ಮಾತೆಗೆ ಎಲ್ಲ ಕಲಾವಿದರೂ ಮಕ್ಕಳಾಗಿದ್ದು, ಕಲಾವಿದನಲ್ಲಿ ಮಾತ್ಸರ್ಯ ಇರಬಾರದು. ಕಲೆ ಉಳಿಸಿ, ಬೆಳೆಸುವಲ್ಲಿ ಕಲಾಭಿಮಾನಿಗಳ ಪಾತ್ರವೂ ಮುಖ್ಯವಿದೆ ಎಂದರು.
ಪ್ರತಿಷ್ಠಾನದ ಮುಖ್ಯಸ್ಥ, ಪೆರ್ಡೂರು ಮೇಳದ ಪ್ರಧಾನ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಪ್ರಾಸ್ತಾವಿಕ ಮಾತನಾಡಿ, ಪ್ರತಿಷ್ಠಾನದ ಕಾರ್ಯಚಟುವಟಿಕೆ ಕುರಿತು ಮಾಹಿತಿ ನೀಡಿದರು.
ನಾಗರಾಜ ಹೆಗಡೆ ಯಲ್ಲಾಪುರ ನಿರೂಪಿಸಿದರು. ನಂತರ ಪ್ರತಿಷ್ಠಾನದ ಮೊದಲ ಕಆರ್ಯಕ್ರಮವಾಗಿ ಯೂಟ್ಯೂಬ್ ಲೈವ್‍ಗಾಗಿ ಮಹಾಮಲ್ಲ ಮಾಗಧ ಪೌರಾಣಿಕ ಆಖ್ಯಾನ ಪ್ರದರ್ಶನಗೊಂಡಿತು. ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ಮದ್ದಳೆಯಲ್ಲಿ ಸುನೀಲ ಕಡತೋಕ, ಚಂಡೆಯಲ್ಲಿ ಸೃಜನ ಹಾಲಾಡಿ, ಪ್ರಸನ್ನ ಹೆಗ್ಗಾರು ಪಾಲ್ಗೊಂಡರು. ಪಾತ್ರಧಾರಿಗಳಾಗಿ ವಿದ್ಯಾಧರ ಜಲವಳ್ಳಿ, ಶಂಕರ ನಿಲ್ಕೋಡ್, ಕಾರ್ತಿಕ ಚಿಟ್ಟಾಣಿ, ಅಶೋಕ ಭಟ್ಟ ಸಿದ್ದಾಪುರ, ಶ್ರೀಧರ ಕಾಸರಕೋಡ ಇತರರು ಪಾಲ್ಗೊಂಡರು.