ಶಿರಸಿ: ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಸೆ.12ರ ಮಧ್ಯಾಹ್ನ 4 ಗಂಟೆಗೆ ಯಲ್ಲಾಪುರ, ಶಿರಸಿಗೆ ಎರಡು ಹೊಸ ಅಂಬುಲೆನ್ಸ ಸಮರ್ಪಣೆ, ಶಿರಸಿ ನಗರದಲ್ಲಿ ಸಮಸ್ಯೆಗೆ ಕಾರಣವಾದ ಇ ಖಾತಾ, ಫಾರಂ ನಂ 3 ಸಮಸ್ಯೆ ನಿವಾರಣೆಗೆ ತಜ್ಞರ ಜೊತೆ ಸಮಾಲೋಚನೆ ಹಾಗೂ ಹಿರಿಯ ನ್ಯಾಯವಾದಿ ನಾರಾಯಣ ಯಾಜಿ ಅವರಿಗೆ ಸಮ್ಮಾನ ಕಾರ್ಯಕ್ರಮ ನಡೆಯಲಿದೆ.
ಕೆರೆಗಳ ಅಭಿವೃದ್ದಿ, ನಗರ ಹಾಗೂ ಗ್ರಾಮೀಣ ಸ್ವಚ್ಛತೆಗೆ ಆದ್ಯತೆ ನೀಡಿ ನಗರದ ಜನರ ಆರೋಗ್ಯ ರಕ್ಷಣೆಗೆ ಕಾರ್ಯ ಮಾಡುತ್ತಿರುವ ಶಿರಸಿ ಜೀವ ಜಲ ಕಾರ್ಯ ಪಡೆ ಹಾಗೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡ ವಿಶ್ವದರ್ಶನ ಸೇವಾ ಸಂಸ್ಥೆ ಆರೋಗ್ಯ ಸಂಬಂಧಿ ಕ್ಷೇತ್ರಕ್ಕೂ ವಿಶಿಷ್ಟವಾಗಿ ಇನ್ನೊಂದು ಸೇವೆ ಸಲ್ಲಿಸಲು ಮುಂದಾಗಿದೆ.
ಶಿರಸಿ ಹಾಗೂ ಸಿದ್ದಾಪುರ, ಯಲ್ಲಾಪುರ ಮುಂಡಗೋಡ ಸೇರಿದಂತೆ ವಿವಿಧ ತಾಲೂಕು ಹಾಗೂ ಹಾವೇರಿ, ಶಿವಮೊಗ್ಗ ಜಿಲ್ಲೆ ಭಾಗದಿಂದಲೂ ಶಿರಸಿ ಆಸ್ಪತ್ರೆಗಳಿಗೆ ನಿತ್ಯ ಅಸಂಖ್ಯ ರೋಗಿಗಳು ಬರುತ್ತಾರೆ. ಅನೇಕ ತುರ್ತು ವೇಳೆ ದೂರದ ಮಂಗಳೂರು, ಮಣಿಪಾಲ ಅಥವಾ ಹುಬ್ಬಳ್ಳಿಯ ಅತ್ಯಾಧುನಿಕ ಸೌಲಭ್ಯದ ಆಸ್ಪತ್ರೆಗಳಿಗೆ ತೆರಳಲು ಅಂಬುಲೆನ್ಸ ಕೊರತೆ ಕೂಡ ಉಂಟಾಗುತ್ತಿದ್ದವು.
ಕೋವಿಡ್ ವ್ಯಾಪಕವಾಗಿದ್ದ ಕಾಲದಲ್ಲೂ ಅಂಬುಲೆನ್ಸ ಸಮಸ್ಯೆ ಉಂಟಾಗಿದ್ದವು. ಈ ಸಮಸ್ಯೆ ನೀಗಿಸಿ ಅನಾರೋಗ್ಯವುಳ್ಳ ಜನರಿಗೆ ನೆರವಾಗುವ, ಜೀವ ಉಳಿಸುವ ಕಾಯಕಕ್ಕೆ ಈ ಉಭಯ ಸಂಸ್ಥೆಗಳು ಕಂಕಣ ಕಟ್ಟಿಕೊಂಡಿವೆ. ಇದರ ಪರಿಣಾಮ ಶಿರಸಿಗೆ ಹಾಗೂ ಯಲ್ಲಾಪುರಕ್ಕೆ ತಲಾ ಒಂದು ಹೊಸ ಅಂಬುಲೆನ್ಸ ಸೇರ್ಪಡೆಯಾಗುತ್ತಿದೆ.
ನಿರ್ವಹಣೆ ಹೇಗೆ?:
ಇಕೊ ಪ್ರೆಂಡ್ಲಿ ಕೆಲಸ ಮಾಡುತ್ತಿರುವ ಕಾರ್ಯಪಡೆ ಹೊಸ ಇಕೋ ಕಾರನ್ನು ಖರೀದಿಸಿ ಅಂಬುಲೆನ್ಸ ಸೇವೆಗೆ ಸಜ್ಜುಗೊಳಿಸಿದೆ. ಯಾರಿಗೇ ತುರ್ತು ಇದ್ದರೂ ಎಲ್ಲಿಗೇ ಬೇಕಿದ್ದರೂ ಅಂಬುಲೆನ್ಸ ಬಳಸಿಕೊಳ್ಳಬಹುದಾಗಿದೆ. ಅಂಬುಲೆನ್ಸ ವಾಹನಕ್ಕೆ ಇಂಧನ ತುಂಬಿಸಿಕೊಂಡು ಅಂಬುಲೆನ್ಸ ಬಳಸಿಕೊಳ್ಳಬಹುದಾಗಿದೆ. ತುರ್ತು ಸಂದರ್ಭದಲ್ಲಿ ಉಭಯ ಅಂಬುಲೆನ್ಸ ಸೇವೆಗೆ 9901975204 /7899355049 ಸಂಪರ್ಕ ಮಾಡಬಹುದಾಗಿದೆ ಎಂದು ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ತಿಳಿಸಿದ್ದಾರೆ.
ಸಮಾಲೋಚನೆ, ಅಭಿನಂದನೆ:
ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ರವಿವಾರ ಸಂಜೆ 4ಕ್ಕೆ ಶಿರಸಿ ನಗರದಲ್ಲಿ ಉಂಟಾದ ಫಾರಂ ನಂಬರ್ 3 ಗ್ರಾಮೀಣ ಭಾಗದ ಇ ಖಾತಾ ಸಮಸ್ಯೆ ನಿವಾರಣೆಗೆ ಸಂಬಂಧಿಸಿ ಕಾನೂನು ತಜ್ಞರ ಜೊತೆ ಸಮಾಲೋಚನೆ ಕೂಡ ಇದೇ ವೇದಿಕೆಯಲ್ಲಿ ಏರ್ಪಾಟಾಗಿದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಈ ಸಮಾಲೋಚನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಈ ಕಾರ್ಯಕ್ರಮದಲ್ಲಿ ಧಾರವಾಡದ ಹೈಕೊರ್ಟ ನ್ಯಾಯವಾದಿ ನಾರಾಯಣ ವಿಷ್ಣು ಯಾಜಿ, ಸಾಮಾಜಿಕ ಕಾರ್ಯಕರ್ತ ನರಸಿಂಹ ಕೋಣೆಮನೆ, ಜೀವ ಜಲಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಸಾಮಾಜಿಕ ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ಭಾರತೀಯ ನ್ಯಾಯ ಕಲ್ಪನೆ ಮತ್ತು ಸಾಮಾಜಿಕ ನ್ಯಾಯ ವಿಷಯದಲ್ಲಿ ಹಂಪಿ ವಿವಿಯಿಂದ ಡಿ.ಲಿಟ್ ಪದವಿ ಪಡೆದ ಉತ್ತರ ಕನ್ನಡದ ಹೊನ್ನಾವರ ಮೂಲದ ನಾರಾಯಣ ಯಾಜಿ ಅವರನ್ನು ಉಭಯ ಸಂಸ್ಥೆಗಳು ಗೌರವಿಸುತ್ತಿವೆ.
ಕಷ್ಟದಲ್ಲಿದ್ದಾಗ ಅಂಬುಲೆನ್ಸ ಸೇವೆ ಸಿಗಬೇಕು, ನನಗೂ ಇಂಥದ್ದೊಂದು ಸಂದಿಗ್ದ ಎದುರಾಗಿದ್ದರಿಂದಲೇ ಅಂಬುಲೆನ್ಸ ಸೇವೆ ಅಣಿಯಾಗಿದ್ದೇವೆ. ಇ ಖಾತಾ, ಫಾರಂ ನಂ 3 ಸಮಸ್ಯೆ ಕೂಡ ಬಗೆ ಹರಿದು ಜನತೆಗೆ ನಿರಾಳವಾಗಬೇಕಿದೆ.
-ಶ್ರೀನಿವಾಸ ಹೆಬ್ಬಾರ್, ಅಧ್ಯಕ್ಷರು ಜೀವ ಜಲಕಾರ್ಯಪಡೆ