ಶಿರಸಿ: ತಾಲೂಕಿನ ಶ್ರೀಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿಯಲ್ಲಿ ಶ್ರೀ ಉಪೇಂದ್ರ ಪೈ ಸೇವಾ ಟ್ರಸ್ಟ, ಶಿರಸಿ ಇವರ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಗಳನ್ನು ಟ್ರಸ್ಟ್‍ನ ಅಧ್ಯಕ್ಷ ಉಪೇಂದ್ರ ಪೈರವರು ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪೈರವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆ ವಿದ್ಯಾರ್ಥಿಗಳ ಯಶಸ್ಸಿನ ಮೊದಲ ಮೆಟ್ಟಿಲು. ಟ್ರಸ್ಟನ ಉದ್ದೇಶ ಇಲ್ಲಿಂದಲೇ ಮಕ್ಕಳನ್ನು ಪ್ರೋತ್ಸಾಹಿಸಿ ಅವರು ಸಮಾಜದ ಮುಖ್ಯ ವಾಹಿನಿಯಲ್ಲಿ ಯಾವಾಗಲೂ ಇರುವಂತೆ ಮಾರ್ಗದರ್ಶನ ನೀಡುವುದು. ಮಕ್ಕಳ ಯಶಸ್ಸು ಅವರ ಶಿಸ್ತುಬದ್ದ, ಕ್ರಮಬದ್ದ ಓದಿನಲ್ಲಿದೆ. ಕೆಟ್ಟ ಹವ್ಯಾಸ ನಮ್ಮನ್ನು ಜೀವನದಿಂದಲೇ ದೂರ ಮಾಡುತ್ತದೆ. ಅವುಗಳ ಬಗ್ಗೆ ಸದಾ ಭಯದಿಂದಲೇ ಇರಬೇಕೆಂದು ಕಿವಿಮಾತು ಹೇಳಿದರು. ಈ ವರ್ಷದ ಎಂಟನೇ ವರ್ಗದ 31 ವಿದ್ಯಾರ್ಥಿಗಳ ಸರಕಾರಿ ಶುಲ್ಕವನ್ನು ಭರಿಸುವುದರೊಂದಿಗೆ 2021-22ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 90%ಕ್ಕಿಂತ ಹೆಚ್ಚು ಅಂಕ ಗಳಿಸಿ ತೇರ್ಗಡೆ ಹೊಂದಿ ಸರಕಾರಿ ಕಾಲೇಜಿಗೆ ಸೇರುವ ಎಲ್ಲ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಭರಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಮ್.ಎಲ್ ಹೆಗಡೆ ಹಲಸಿಗೆ ಮಾತನಾಡಿ ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಅಗತ್ಯದ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ.ಸರ್ಕಾರದಿಂದ ಸಿಗುವ ಸೌಲಭ್ಯಗಳಲ್ಲದೆ ದಾನಿಗಳಿಂದಲೂ ಸಕಲ ರೀತಿಯ ಪ್ರೋತ್ಸಾಹ ನೀಡುತ್ತಿದ್ದೆವೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಂಡು ಚೆನ್ನಾಗಿ ಓದಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಮುಖ್ಯಾಧ್ಯಾಪಕ ಎಮ್ ಜಿ ಹೆಗಡೆ ಸ್ವಾಗತಿಸಿದರು. ಆರ್ ಕೆ ಚೌಹ್ವಾಣ್ ವಂದಿಸಿದರು. ನಾರಾಯಣ ದೈಮನೆ ಕಾರ್ಯಕ್ರಮ ನಿರೂಪಿಸಿದರು.